ಮಂಗಳೂರು: ನಗರದ ಪಡೀಲ್‌ನಲ್ಲಿರುವ ಕಾಂಚನ್ ಹುಂಡೈ ಶೋರೂಂ ಹಾಗೂ ವರ್ಕ್‌ಶಾಪ್‌ನಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಪೇಂಟಿಂಗ್ ಬೂತ್‌ನಲ್ಲಿದ್ದ ಒಂದು ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಶೋರೂಂ ಹೊರಭಾಗದಲ್ಲಿ ನಿಲ್ಲಿಸಿದ್ದ 8 ಕಾರುಗಳು ಬೆಂಕಿಯ ಶಾಖದಿಂದ ಹಾನಿಯಾಗಿದೆ.
ಕಾರುಗಳಿಗೆ ಬಣ್ಣ ಬಳಿಯುವ ಪೇಂಟಿಂಗ್ ಬೂತ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಕ್ಷಣಾರ್ಧದಲ್ಲಿ ಹೊಗೆ ಆವರಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕದ್ರಿ ಹಾಗೂ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.
ಸಂಜೆ ಸುಮಾರು 7.50ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಸ್ಥಳಕ್ಕೆ ತೆರಳಿದ ಸಿಬ್ಬಂದಿ ಸುಮಾರು 20ರಿಂದ 25 ನಿಮಿಷಗಳ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪರಿಣಾಮ ಶೋರೂಂನ ಇತರೆ ಭಾಗಗಳಿಗೆ ಬೆಂಕಿ ಹರಡುವುದು ತಪ್ಪಿದೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ.
ಪ್ರಭಾರ ಮುಖ್ಯ ಅಗ್ನಿಶಾಮಕ ಅಧಿಕಾರಿ ಶಂಕರ್ ಎಂ., ಕದ್ರಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಹಾಗೂ ಪಾಂಡೇಶ್ವರ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಕೆ.ಎನ್. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಐವರು ಅಧಿಕಾರಿಗಳು ಹಾಗೂ 10 ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




