Home Crime ಬ್ರಹ್ಮಾವರ: ಬೈಕ್ ಢಿಕ್ಕಿ : ಗಂಭೀರ ಗಾಯಗೊಂಡ ಪಾದಚಾರಿ ಚಿಕಿತ್ಸೆ ಫಲಿಸದೆ ಸಾವು…!!

ಬ್ರಹ್ಮಾವರ: ಬೈಕ್ ಢಿಕ್ಕಿ : ಗಂಭೀರ ಗಾಯಗೊಂಡ ಪಾದಚಾರಿ ಚಿಕಿತ್ಸೆ ಫಲಿಸದೆ ಸಾವು…!!

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ಬಳಿ ನಡೆದಿದೆ.

ದಿನಾಂಕ 09-10-2026ರಂದು ಬೆಳಿಗ್ಗೆ ಸುಮಾರು 7:45 ಗಂಟೆಗೆ ಉಪ್ಪೂರು ಗ್ರಾಮದ ರಿಕ್ಷಾ ನಿಲ್ದಾಣದ ಸಮೀಪ ಹರ್ಮನ್ ಡಿಸೋಜಾ ಅವರು ಕುಂದಾಪುರ–ಉಡುಪಿ ಏಕಮುಖ ರಸ್ತೆಯನ್ನು ದಾಟಿ ರಸ್ತೆಯ ಪಶ್ಚಿಮ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಸುದೀಪ್ ಎಂಬಾತನು ಕೆಎ-20-ಇಜೆ-4399 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್‌ನಲ್ಲಿ ಸಹಸವಾರನನ್ನು ಕೂರಿಸಿಕೊಂಡು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಹರ್ಮನ್ ಡಿಸೋಜಾ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಹರ್ಮನ್ ಡಿಸೋಜಾ ಅವರ ಬಲ ಕಿವಿಯ ಬಳಿ ಹಾಗೂ ತಲೆಯ ಹಿಂಭಾಗದಲ್ಲಿ ಗಂಭೀರ ರಕ್ತಗಾಯಗಳಾಗಿದ್ದವು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಮಧ್ಯಾಹ್ನ 12:26 ಗಂಟೆಗೆ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರನಿಗೂ ತರಚಿದ ಗಾಯಗಳಾಗಿವೆ.

ಈ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.