ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವಕ್ವಾಡಿ ಗ್ರಾಮದ ಕಲ್ಸಂಕ ತೋಡಿನ ಸಮೀಪ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ವಿಚಾರವನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕುಟುಂಬದ ಸದಸ್ಯರಿಗೂ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 08-10-2026ರಂದು ವಕ್ವಾಡಿ ಗ್ರಾಮದ ಸತ್ಯರಂಜನ್ ಹೆಗ್ಡೆ (62) ಎಂಬವರು ತಮ್ಮ ಅಕ್ಕ ಪ್ರೇಮಲತಾ ಎಸ್. ಶೆಟ್ಟಿ ಅವರ ಜಾಗದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದನ್ನು ಗಮನಿಸಿ 112 ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಬಗ್ಗೆ ಮಾತನಾಡುತ್ತಿದ್ದ ವೇಳೆ ಸಂಪತ್ ಕುಮಾರ್ ಎಂಬಾತ ಕಾರಿನಲ್ಲಿ ಬಂದು ಸತ್ಯರಂಜನ್ ಹೆಗ್ಡೆ ಅವರ ಕಾಲರ್ ಹಿಡಿದು, ಕೈಯಿಂದ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಸತ್ಯರಂಜನ್ ಅವರ ಮಗ ಸಾತ್ವಿಕ್ ಅವರ ಮೇಲೂ ಹಲ್ಲೆ ನಡೆಸಲಾಗಿದ್ದು, ತಡೆಯಲು ಬಂದ ಪತ್ನಿ ಚಂದ್ರವಳಿ ಎಸ್. ಹೆಗ್ಡೆ ಹಾಗೂ ಅಕ್ಕ ಪ್ರೇಮಲತಾ ಶೆಟ್ಟಿ ಅವರನ್ನು ದೂಡಿ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಆರೋಪಿಯೊಂದಿಗಿದ್ದ ಕೆಲಸಗಾರನೂ ಸತ್ಯರಂಜನ್ ಅವರಿಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಆರೋಪಿಯು ಬೆದರಿಕೆ ಹಾಕಿದ್ದಾನೆ ಎಂದು ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



