Home Crime ಮಂಗಳೂರು: ಜಗಳ ಬಿಡಿಸಲು ಬಂದ ವಿದ್ಯಾರ್ಥಿಗೇ ಚೂರಿ ಇರಿತ : 6 ಮಂದಿಯ ವಿರುದ್ಧ ಪ್ರಕರಣ...

ಮಂಗಳೂರು: ಜಗಳ ಬಿಡಿಸಲು ಬಂದ ವಿದ್ಯಾರ್ಥಿಗೇ ಚೂರಿ ಇರಿತ : 6 ಮಂದಿಯ ವಿರುದ್ಧ ಪ್ರಕರಣ ದಾಖಲು…!!

ಮಂಗಳೂರು: ಕಾಲೇಜು ಸಮೀಪ ವಿದ್ಯಾರ್ಥಿಯೊಬ್ಬನ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಅ.3ರಂದು ನಗರದ ಬಳ್ಳಾಲ್‌ಭಾಗ್‌ನಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಬೆಳ್ತಂಗಡಿ ಮೂಲದ ಹಾಗೂ ಬಳ್ಳಾಲ್‌ಭಾಗ್‌ನ ಶ್ರೀದೇವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿರುವ ಮಹಮ್ಮದ್ ಉನೈಸ್ (20) ಎಂದು ಗುರುತಿಸಲಾಗಿದೆ.

ಅ.3ರಂದು ಬೆಳಗ್ಗೆ ಕಾಲೇಜಿನ ಸಮೀಪದ ಸಿಟಿ ಅರೇನಾ ಟರ್ಫ್‌ನಲ್ಲಿ ಉನೈಸ್‌ನ ಸ್ನೇಹಿತ ರಾಯಿಝ್ ಹಾಗೂ ಶ್ರೀದೇವಿ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಕಾಟಿಪಳ್ಳದ ರಿಯಾನ್ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ.

ಈ ವೇಳೆ ಉನೈಸ್ ಸೇರಿದಂತೆ ಕೆಲ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಆಗ ರಿಯಾನ್ ಉನೈಸ್‌ಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಂತರ ಮಧ್ಯಾಹ್ನ ಸುಮಾರು 1.45ರ ವೇಳೆಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ ರಿಯಾನ್ ಸೇರಿದಂತೆ ಐವರು ಎರಡು ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದಿದ್ದಾರೆ.

ಉನೈಸ್‌ನನ್ನು ಸುತ್ತುವರಿದ ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಚೂರಿ ತೆಗೆದ ಆರೋಪಿಗಳು ಉನೈಸ್‌ನ ತಲೆ, ಬೆನ್ನು, ಎಡಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಉನೈಸ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿ ಉನೈಸ್ ನೀಡಿದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 88/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ.