Home Crime ಅಶ್ಲೀಲ ಮೆಸೇಜ್ ಕಳುಹಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದವನಿಗೆ ಚಪ್ಪಲಿ ಸೇವೆ : ವಿಡಿಯೋ ವೈರಲ್…!!

ಅಶ್ಲೀಲ ಮೆಸೇಜ್ ಕಳುಹಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದವನಿಗೆ ಚಪ್ಪಲಿ ಸೇವೆ : ವಿಡಿಯೋ ವೈರಲ್…!!

ಬೆಂಗಳೂರು : ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಹಾಗೂ ವಿಡಿಯೋ ಕಾಲ್ ಮೂಲಕ ಕಿರುಕುಳ ನೀಡುತ್ತಿದ್ದ ವಿಕೃತ ಕಾಮಿಯೋರ್ವನಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿ ಬುದ್ದಿ ಕಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಮಹಿಳೆಯ ಕಾರ್ಯಕ್ಕೆ ಸಾರ್ವಜನಿಕರು ಸೈ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ತಂತ್ರಜ್ಞಾನವು ಇಂದಿನ ಜನರ ಜೀವನವನ್ನು ಸುಲಭಗೊಳಿಸುತ್ತಿರುವುದು ಏನೋ ನಿಜ, ಆದರೆ ಅವುಗಳನ್ನು ಅಷ್ಟೆ ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ನಡೆಯುತಲೇ ಇವೆ.

ಇದಕ್ಕೆ ಜ್ವಲಂತ ಉದಾಹರಣೆ ಎಂಬಂತೆ, ಇದೀಗ ಬೆಂಗಳೂರಿನಲ್ಲಿ ಮಹಿಳೆಯರಿಗೆ ನಿರಂತರವಾಗಿ ಅಶ್ಲೀಲ ಮೆಸೇಜ್‌ಗಗಳನ್ನು ಮತ್ತು ವಿಡಿಯೋ ಕಾಲ್‌ಗಳ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬರು ಸಾರ್ವಜನಿಕರ ಎದುರೇ ಚಪ್ಪಲಿಯಿಂದ ಥಳಿಸಿ ಪಾಠ ಕಲಿಸಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಾಹಿತಿಯ ಪ್ರಕಾರ, ಬೆಂಗಳೂರಿನ ಈ ವ್ಯಕ್ತಿ ಹಲವಾರು ಮಹಿಳೆಯರ ಮೊಬೈಲ್ ಸಂಖ್ಯೆಯನ್ನು ಹೇಗೋ ಪಡೆದು ಪದೇ ಪದೇ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದನೆಂದು ಆರೋಪಿಸಲಾಗಿದೆ. ಅದು ಕೇವಲ ಮೆಸೇಜ್‌ಗಳಿಗೆ ಸೀಮಿತವಾಗದೇ, ವಿಡಿಯೋ ಕಾಲ್ ಮಾಡಿ ಮಹಿಳೆಯರನ್ನು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ.

ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಹಿನ್ನಲೆಯಲ್ಲಿ ಇತನ ಕೃತ್ಯಕ್ಕೆ ಮಹಿಳೆಯರು ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಇದೀಗ ಆತನ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬರು ಸುಮ್ಮನೆ ಸಹಿಸಿಕೊಳ್ಳದೆ, ಈತನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ತಮ್ಮ ಕೆಲವು ಪರಿಚಿತರು ಮತ್ತು ಸಂಗಡಿಗರ ಸಹಾಯದಿಂದ ಆತನನ್ನು ನೇರವಾಗಿ ಭೇಟಿ ಮಾಡಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ನಂತರ ಸಾರ್ವಜನಿಕರ ಎದುರೇ ಆಕ್ರೋಶಗೊಂಡ ಮಹಿಳೆ, “ಪದೇ ಪದೇ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ಕೊಡುತ್ತಿದ್ದೀಯಾ? ಎಷ್ಟು ಮಹಿಳೆಯರಿಗೆ ಇದೇ ರೀತಿ ಮಾಡಿದ್ದೀಯೋ ನೋಡೋಣ” ಎಂದು ತರಾಟೆಗೆ ತೆಗೆದುಕೊಂಡು ಚಪ್ಪಲಿಯಿಂದ ಥಳಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಇದೇ ವೇಳೆ ಆತನ ಮೊಬೈಲ್ ಪರಿಶೀಲಿಸುವಂತೆ ಸಾರ್ವಜನಿಕರಿಗೆ ಹೇಳಿದ್ದಾರೆ. ಈ ಘಟನೆ ನಡೆದ ಸ್ಥಳದಲ್ಲಿ ಕೆಲಕಾಲ ಹೈಡ್ರಾಮಾ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ಜನರು ಕೂಡ ಘಟನೆಯನ್ನು ಗಮನಿಸಿದ್ದಾರೆ.

ಧೈರ್ಯ ಮತ್ತು ಸಮಯಪ್ರಜ್ಞೆಗೆ ಮೆಚ್ಚುಗೆ :
ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಮಹಿಳೆಯರು ಧೈರ್ಯವಾಗಿ ನಿಲ್ಲಬೇಕು ಎಂಬ ಸಂದೇಶವನ್ನು ಈ ಘಟನೆ ನೀಡಿದೆ. ಸಾರ್ವಜನಿಕ ವಲಯದಲ್ಲಿ ನಡೆದ ಈ ಘಟನೆ ಇದೀಗ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಮಹಿಳೆಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಘಟನೆಗಳು ಸೈಬರ್ ಕಿರುಕುಳ ಮತ್ತು ಮಹಿಳೆಯರ ಸುರಕ್ಷತೆ ಕುರಿತಾಗಿ ಸಮಾಜದಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬುದನ್ನು ಮತ್ತೆ ನೆನಪಿಸಿವೆ.

ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗ ಇತ್ತೀಚೆಗೆ ಮಹಿಳೆಯರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಆನ್‌ಲೈನ್ ಮೂಲಕ ಅಶ್ಲೀಲ ಸಂದೇಶಗಳು, ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಿದೆ.

ಬೆಂಗಳೂರು ಘಟನೆಯಲ್ಲಿ ಮಹಿಳೆ ತೋರಿದ ಧೈರ್ಯ ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದೆ. ಸಮಾಜದಲ್ಲಿ ಇಂತಹ ವಿಕೃತ ಮನಸ್ಸಿನವರ ವಿರುದ್ಧ ಕಾನೂನು ಮತ್ತು ಸಾರ್ವಜನಿಕ ಜಾಗೃತಿ ಎರಡೂ ಬಲವಾಗಬೇಕು. ಮಹಿಳೆಯರ ಗೌರವ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ.