Home Crime ಬ್ರಹ್ಮಾವರ: ಮನೆಗೆ ನುಗ್ಗಿ ತಾಮ್ರ, ಹಿತ್ತಾಳೆ ವಸ್ತುಗಳ ಕಳವು…!!

ಬ್ರಹ್ಮಾವರ: ಮನೆಗೆ ನುಗ್ಗಿ ತಾಮ್ರ, ಹಿತ್ತಾಳೆ ವಸ್ತುಗಳ ಕಳವು…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದ ಚಾಂಪಾಡಿಯ ಜಲಜಾಕ್ಷೀ ನಿಲಯದಲ್ಲಿ ಮನೆಗೆ ನುಗ್ಗಿದ ಕಳ್ಳರು ತಾಮ್ರ ಹಾಗೂ ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಆಗಸ್ಟ್ 29ರಿಂದ ಸೆಪ್ಟೆಂಬರ್ 27ರ ಮಧ್ಯಾಹ್ನ 12 ಗಂಟೆಯ ನಡುವಿನ ಅವಧಿಯಲ್ಲಿ ಮನೆಗೆ ಬೀಗ ಹಾಕಲಾಗಿತ್ತು. ಈ ಸಂದರ್ಭ ಮನೆಯ ಪೂರ್ವ ಭಾಗದ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಬಚ್ಚಲು ಮನೆಯಲ್ಲಿದ್ದ ತಾಮ್ರದ ಹಂಡೆ, ತಾಮ್ರದ ಕೊಡಪಾನ, ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಲೈಟರ್, ನಾಲ್ಕು ಹಿತ್ತಾಳೆಯ ಕಾಲುದೀಪಗಳು, ಹಿತ್ತಾಳೆಯ ಜಾಗಂಟೆ, ಆರತಿ ತಟ್ಟೆ, ಪೂಜಾ ಗಂಟೆ ಹಾಗೂ ಕಾಣಿಕೆ ತುಂಬಿದ್ದ ಮೂರು ಡಬ್ಬಿಗಳನ್ನು ಕಳವು ಮಾಡಿದ್ದಾರೆ.

ಕಳವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹30,000 ಎಂದು ತಿಳಿದುಬಂದಿದೆ.

ಈ ಕುರಿತು ಅಣ್ಣಪ್ಪ ಪೂಜಾರಿ (50), ಹನೇಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.