ಮಂಗಳೂರು: ನಗರದ ಕಂಕನಾಡಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇರೆಗೆ ಟಿಪ್ಪರ್ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾತ್ರಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕಣ್ಣೂರು ಜಂಕ್ಷನ್‌ನಿಂದ ಬಡ್ಲ ಗುತ್ತು ರಸ್ತೆಯಾಗಿ ಬಡ್ಲ ಧಕ್ಕೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ರಾತ್ರಿ 11.15ರ ಸುಮಾರಿಗೆ ಬಡ್ಲ ಧಕ್ಕೆ ಸಮೀಪ ಮರಳು ತುಂಬಿಸಿಕೊಂಡು ತೆರಳುತ್ತಿದ್ದ EICHER ಟಿಪ್ಪರ್ ಲಾರಿ ಪೊಲೀಸರ ಗಮನಕ್ಕೆ ಬಂದಿದೆ.
ಪೊಲೀಸರು ಲಾರಿಯನ್ನು ಹಿಂಬಾಲಿಸುತ್ತಿದ್ದ ವೇಳೆ ಚಾಲಕ ಲಾರಿಯನ್ನು ನಿಲ್ಲಿಸಿ, ವಾಹನದಿಂದ ಇಳಿದು ಪರಾರಿಯಾಗಿದ್ದಾನೆ. ಪರಿಶೀಲನೆ ನಡೆಸಿದಾಗ KA-12-B-7412 ನೋಂದಣಿ ಸಂಖ್ಯೆಯ EICHER ಟಿಪ್ಪರ್‌ನಲ್ಲಿ ಸುಮಾರು 2 ಯುನಿಟ್ ಮರಳು ಪತ್ತೆಯಾಗಿದೆ.
ವಶಪಡಿಸಿಕೊಂಡ ಟಿಪ್ಪರ್‌ನ ಅಂದಾಜು ಮೌಲ್ಯ ₹5 ಲಕ್ಷ ಹಾಗೂ ಮರಳಿನ ಮೌಲ್ಯ ಸುಮಾರು ₹10 ಸಾವಿರ ಸೇರಿದಂತೆ ಒಟ್ಟು ₹5.10 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಹಾಗೂ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.



