ಪಡುಬಿದ್ರೆ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸೆ.24ರಂದು ಬೆಳಗ್ಗೆ ಪಡುಬಿದ್ರೆ ಜಂಕ್ಷನ್ ಬಳಿ ನಡೆದಿದೆ.
ಮೃತರನ್ನು ನಿರಂಜನ ಹೊಳ್ಳ (45) ಎಂದು ತಿಳಿಯಲಾಗಿದೆ.
ಬೆಳಗ್ಗೆ ಸುಮಾರು 11:30ಕ್ಕೆ ಕಾಪು ತಾಲೂಕಿನ ನಡ್ಸಾಲು ಗ್ರಾಮದ ಪಡುಬಿದ್ರೆ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತ ಸಂಭವಿಸಿದೆ.
KA-20-MD-3373 ಸಂಖ್ಯೆಯ ಕಾರನ್ನು ಅದರ ಚಾಲಕ ಕಿರಣ್ ಕುಮಾರ್ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ವೇಳೆ, ರಸ್ತೆಯ ಎಡಬದಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ KA-05-LP-4055 ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಕಾರಿನ ಎಡಭಾಗ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ನಿರಂಜನ ಹೊಳ್ಳ ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಕಾರಿನ ಹಿಂಭಾಗದ ಚಕ್ರದ ಅಡಿಗೆ ಅವರ ತಲೆ ಸಿಲುಕಿಕೊಂಡು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪಡುಬಿದ್ರಿಯ ಸೌರಭ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



