ಕುಂದಾಪುರ: ಅತ್ತಿಗೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಚಾರವನ್ನು ಆರೋಪಿಯ ಬಳಿ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿ ಚೂರಿಯಿಂದ ಹೊಟ್ಟೆಗೆ ತಿವಿದು ಕೊಲೆ ಬೆದರಿಕೆ ಹಾಕಿರುವ ಗಂಭೀರ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು ಗ್ರಾಮದ ಪಿಂಗಾಣಿಗುಡ್ಡೆಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪಿಂಗಾಣಿಗುಡ್ಡೆ ನಿವಾಸಿ ಆಕಾಶ್ ಎಂದು ಗುರುತಿಸಲಾಗಿದೆ.
ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಪಿಂಗಾಣಿಗುಡ್ಡೆ ನಿವಾಸಿ ರಾಮ ಕುಮಾರ್ ಎಂದು ತಿಳಿದು ಬಂದಿದೆ.ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾಮ ಕುಮಾರ್ ಅವರ ಪತ್ನಿಯ ಅಕ್ಕ ರೇಖಾ ಅವರಿಗೆ ಆರೋಪಿ ಆಕಾಶ್ ಕೆಟ್ಟ ಶಬ್ದ ಬಳಸಿದ್ದ ಎನ್ನಲಾಗಿದೆ. ಈ ವಿಚಾರವನ್ನು ರೇಖಾ ಅವರು ರಾಮ ಕುಮಾರ್ ಅವರಿಗೆ ತಿಳಿಸಿದ್ದರು. ಬಳಿಕ ರಾಮ ಕುಮಾರ್ ಅವರು ತಮ್ಮ ಸ್ನೇಹಿತ ಮುರುಳಿ ಹಾಗೂ ರೇಖಾ ಅವರೊಂದಿಗೆ ತಲ್ಲೂರು ಗ್ರಾಮದ ಪಿಂಗಾಣಿಗುಡ್ಡೆಯ ಬಾವಿಯೊಂದರ ಬಳಿ ಈ ಕುರಿತು ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಆಕಾಶ್‌ನನ್ನು ರಾಮ ಕುಮಾರ್ ಅವರು ಈ ವಿಚಾರದ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆಕಾಶ್ ತನ್ನ ಪ್ಯಾಂಟ್ ಜೇಬಿನಲ್ಲಿದ್ದ ಚೂರಿಯನ್ನು ತೆಗೆದು ರಾಮ ಕುಮಾರ್ ಅವರ ಎಡಭಾಗದ ಹೊಟ್ಟೆಗೆ ಇರಿದಿದ್ದಾನೆ. ರಾಮ ಕುಮಾರ್ ಅವರನ್ನು ರಕ್ಷಿಸಲು ಮುಂದಾದ ಮುರುಳಿ ಅವರ ಎಡಭಾಗದ ಬೆನ್ನಿಗೂ ಚೂರಿಯಿಂದ ಇರಿದು, ಇಬ್ಬರಿಗೂ ಕೊಲೆ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚೂರಿ ಇರಿತದಿಂದ ಗಾಯಗೊಂಡ ರಾಮ ಕುಮಾರ್ ಹಾಗೂ ಮುರುಳಿ ಅವರನ್ನು ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದ್ದು ಅಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿದ ಪೊಲೀಸರು ಆರೋಪಿ ಆಕಾಶ್‌ನನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.




