Home Crime ಮಣಿಪಾಲ : ಬಂಡೆ ಕಲ್ಲುಗಳ ಸ್ಫೋಟ : ಪ್ರಕರಣ ದಾಖಲು…!!

ಮಣಿಪಾಲ : ಬಂಡೆ ಕಲ್ಲುಗಳ ಸ್ಫೋಟ : ಪ್ರಕರಣ ದಾಖಲು…!!

ಮಣಿಪಾಲ: ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಸರಕಾರಿ ಜಮೀನಿನಲ್ಲಿ ಬಂಡೆ ಕಲ್ಲುಗಳನ್ನು ಸ್ಫೋಟಿಸಲು ಸ್ಫೋಟಕ ವಸ್ತುಗಳನ್ನು ಅನಧಿಕೃತವಾಗಿ ಬಳಸಿದ ಆರೋಪದಡಿ ಇಬ್ಬರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಪ್ರದೇಶದಲ್ಲಿರುವ ಸರ್ವೆ ನಂ.112/2ರ 1.54 ಎಕರೆ ವಿಸ್ತೀರ್ಣದ ಸರಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಸೆ.5ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ.

ಆರೋಪಿತರಾದ ರೋಜಿನಾ ರೋಡ್ರಿಗಸ್ ಹಾಗೂ ಅವರ ಪರವಾಗಿ ಅಧಿಕಾರ ಪತ್ರ ಹೊಂದಿರುವ ರಿಚಾರ್ಡ್ ಪೌಲ್ ಫೆರಾವೋ ಅವರು ಯಾವುದೇ ಸಂಬಂಧಪಟ್ಟ ಇಲಾಖೆಯ ಅನುಮತಿ ಅಥವಾ ಪರವಾನಗಿ ಪಡೆಯದೇ ಜಾಗದಲ್ಲಿದ್ದ ಬಂಡೆ ಕಲ್ಲುಗಳನ್ನು ಯಾವುದೋ ಸ್ಫೋಟಕ ವಸ್ತುವನ್ನು ಬಳಸಿ ಅನಧಿಕೃತವಾಗಿ ಸ್ಫೋಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕೃತ್ಯದಿಂದ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸ್ಫೋಟಕ ಬಳಕೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ಸರಕಾರಿ ಆಸ್ತಿಯ ಸಂರಕ್ಷಣೆ ಕುರಿತು ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಮರ್ಣೆ ಗ್ರಾಮದ ಜೆರಾಲ್ಡ್ ನೊರೋಹ್ನ (42) ಅವರು ನೀಡಿದ ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2026 ದಾಖಲಿಸಲಾಗಿದೆ.
ಆರೋಪಿತರ ವಿರುದ್ಧ BNS ಕಲಂ 288 ಜೊತೆಗೆ 3(5) ಹಾಗೂ Explosive Actನ ಕಲಂ 9(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಫೋಟಕ ವಸ್ತು ಬಳಕೆ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ಕಾರ್ಯ ಕೈಗೊಂಡಿದ್ದಾರೆ.