ಮಂಗಳೂರು: ನಗರದ ಹೊರವಲಯದ MRPL (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್) ಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.
ಸ್ಫೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಮನೆಗಳ ಗೋಡೆಗಳಲ್ಲಿ ಬಿರುಕು, ಕಿಟಕಿ ಗಾಜುಗಳು ಒಡೆದಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬಜಪೆ, ಜೋಕಟ್ಟೆ, ಸುರತ್ಕಲ್ ಸುತ್ತಮುತ್ತ ಕೆಲ ಕಿಲೋಮೀಟರ್ ದೂರದವರೆಗೂ ಸ್ಫೋಟದ ಶಬ್ದ ಮತ್ತು ಕಂಪನ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಏಕಾಏಕಿ ಕೇಳಿದ ದೊಡ್ಡ ಶಬ್ದದಿಂದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಗೆ ನಿಖರ ಕಾರಣ ಏನು ಮತ್ತು MRPL ಒಳಗೆ ಯಾವುದೇ ತಾಂತ್ರಿಕ ದೋಷದಿಂದ ಸ್ಫೋಟ ಸಂಭವಿಸಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. MRPL ಅಧಿಕಾರಿಗಳು ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಅಧಿಕೃತ ಮಾಹಿತಿ ಇನ್ನು ತಿಳಿದು ಬರಬೇಕಿದೆ.





