ಕಾರ್ಕಳ: ಮಲ್ಲಿಗೆ ಹೂ ಕೊಯ್ಯಲು ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ನಿಟ್ಟೆ ನಿವಾಸಿ ಲೀನಾ ಲೋಬೋ (72) ಎಂದು ಗುರುತಿಸಲಾಗಿದೆ.
ಲೀನಾ ಲೋಬೋ ಅವರು ಮಲ್ಲಿಗೆ ಕೃಷಿ ನಡೆಸುತ್ತಿದ್ದು, ಶುಕ್ರವಾರ ಮುಂಜಾನೆ ಎಂದಿನಂತೆ ಹೂ ಕೊಯ್ಯಲು ತೋಟಕ್ಕೆ ತೆರಳಿದ್ದರು. ಈ ವೇಳೆ ಮಲ್ಲಿಗೆ ಗಿಡಗಳ ಮೇಲೆ ಬಿದ್ದಿದ್ದ ಎಲ್‌ಟಿ ವಿದ್ಯುತ್ ತಂತಿ ಅವರ ಸಂಪರ್ಕಕ್ಕೆ ಬಂದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಸಮೀಪದಲ್ಲಿರುವ ಎರಡು ವಿದ್ಯುತ್ ಕಂಬಗಳ ಪೈಕಿ ಒಂದು ಎತ್ತರದಲ್ಲಿದ್ದು, ಮತ್ತೊಂದು ತಗ್ಗಿನಲ್ಲಿದೆ. ಈ ಎರಡು ಕಂಬಗಳ ನಡುವಿನ ವಿದ್ಯುತ್ ತಂತಿ ಜೋತುಬಿದ್ದ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಈ ಕುರಿತು ಮೆಸ್ಕಾಂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಜೋತುಬಿದ್ದ ವಿದ್ಯುತ್ ತಂತಿ ಸರಿಪಡಿಸಲು ಮೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಹಿಸಿದ್ದೇ ಲೀನಾ ಅವರ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



