Home Crime ಗಡಿಪಾರು ಅವಧಿ ಮುಗಿಯುತ್ತಿದ್ದಂತೆ ಪ್ರತ್ಯಕ್ಷರಾದ ಮಹೇಶ್ ಶೆಟ್ಟಿ ತಿಮರೋಡಿ…!!

ಗಡಿಪಾರು ಅವಧಿ ಮುಗಿಯುತ್ತಿದ್ದಂತೆ ಪ್ರತ್ಯಕ್ಷರಾದ ಮಹೇಶ್ ಶೆಟ್ಟಿ ತಿಮರೋಡಿ…!!

ಮಂಗಳೂರು : ಗಡಿಪಾರು ಆದೇಶ ಹೊರಬಿದ್ದ ಬಳಿಕ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಒಂದು ವರ್ಷ ಕಳೆಯುತ್ತಿದ್ದಂತೆ ಮತ್ತೆ ತಮ್ಮ ನಿವಾಸದಲ್ಲಿ ಸಾರ್ವಜನಿಕವಾಗಿ ಪ್ರತ್ಯಕ್ಷರಾಗಿ ಸಭೆ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ಬೆಂಬಲಿಗರಿಂದ ಬೃಹತ್ ಹಾರದ ಸನ್ಮಾನವನ್ನೂ ಸ್ವೀಕರಿಸುವ ಮೂಲಕ ಇಡೀ ಪೊಲೀಸ್ ವ್ಯವಸ್ಥೆಯನ್ನು ಅಣಕಿಸಿದ್ದಾರೆ.

32 ಪ್ರಕರಣಗಳ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ (AC) ಸ್ಟೆಲ್ಲಾ ವರ್ಗೀಸ್ ಅವರು ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಗೆ ಒಂದು ವರ್ಷ ಗಡಿಪಾರು ಮಾಡಿ ಆದೇಶಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ತಿಮ್ಮರೋಡಿ ನ್ಯಾಯಾಲಯಗಳ ಮೊರೆ ಹೋಗಿದ್ದರು. ಆರಂಭದಲ್ಲಿ ಮಧ್ಯಂತರ ತಡೆ ಸಿಕ್ಕಿತಾದರೂ, 2026ರ ಜೂನ್ 4 ರಂದು ಹೈಕೋರ್ಟ್ ವಿಭಾಗೀಯ ಪೀಠವು ಅವರ ಮೇಲ್ಮನವಿಯನ್ನು ತಿರಸ್ಕರಿಸಿ ತಡೆ ನೀಡಲು ನಿರಾಕರಿಸಿತು. ತಕ್ಷಣವೇ ಅವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರಾದರೂ, 2026ರ ಜುಲೈ 13 ರಂದು ಸುಪ್ರೀಂ ಕೋರ್ಟ್ ಕೂಡ ಅರ್ಜಿಯನ್ನು ವಜಾಗೊಳಿಸಿ ಗಡಿಪಾರು ಆದೇಶಕ್ಕೆ ತಡೆ ನೀಡಲು ಖಡಾಖಂಡಿತವಾಗಿ ನಿರಾಕರಿಸಿತು.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಎರಡೂ ಸ್ಪಷ್ಟವಾಗಿ ಗಡಿಪಾರಿಗೆ ತಡೆ ನೀಡಲು ನಿರಾಕರಿಸಿದರೂ, ಪೊಲೀಸರು ಬಂಧಿಸಿ ಗಡಿಪಾರು ಜಾರಿಗೊಳಿಸದೆ ಕೈಚೆಲ್ಲಿ ಕುಳಿತಿದ್ದು ಅಚ್ಚರಿ ಮೂಡಿಸಿದೆ.

ಶಿಕ್ಷೆ ಅನುಭವಿಸದೆ ತಲೆಮರೆಸಿಕೊಂಡು ವರ್ಷ ಕಳೆದರೆ ಆದೇಶ ತಾನಾಗಿಯೇ ರದ್ದಾಗುತ್ತದೆಯೇ ಎಂಬ ಕಾನೂನು ಜಿಜ್ಞಾಸೆ ಎದ್ದಿದೆ.
ಆದೇಶ ಧಿಕ್ಕರಿಸಿ ತಪ್ಪಿಸಿಕೊಂಡು ಪ್ರತ್ಯಕ್ಷವಾದ ವ್ಯಕ್ತಿಗೆ ಸಾರ್ವಜನಿಕವಾಗಿ ಸನ್ಮಾನ ಮಾಡಲಾಗುತ್ತಿದೆ. ಕಾನೂನು ಮತ್ತು ಆಡಳಿತ ವ್ಯವಸ್ಥೆ ಎಷ್ಟು ಸದೃಢವಾಗಿದೆ ಎನ್ನುವುದನ್ನು ತೋರಿಸುತ್ತಿದೆ.