ಉಡುಪಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಕರಾವಳಿಗರ ಪಾಲಿಗೆ ಹೆಮ್ಮೆಯ ವಿಚಾರವಾಗಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಭೆ ಹೊಸ ಬಲ ನೀಡಲಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.
ಕರಾವಳಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಗರಿಮೆ ಹೊಂದಿದ್ದು, ಯುವ ಸಮೂಹಕ್ಕೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಐಟಿ ಸೇರಿದಂತೆ ವಿವಿಧ ಕಂಪನಿಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ.
ಈ ಮೂಲಕ ಕರಾವಳಿಯ ಯುವಜನರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮಹತ್ತರ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಕರಾವಳಿ ಪ್ರದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ, ಹೆಚ್ಚಿನ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಅಗತ್ಯವಿದೆ. ದೇಶ-ವಿದೇಶಗಳ ಪ್ರವಾಸಿಗರು ಕರಾವಳಿಯನ್ನು ಮತ್ತಷ್ಟು ಗುರುತಿಸುವಂತಾಗಬೇಕು.
ಈ ನಿಟ್ಟಿನಲ್ಲಿ ಕರಾವಳಿಯಲ್ಲೇ ಸಚಿವ ಸಂಪುಟ ಸಭೆ ನಡೆಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಮೀನುಗಾರಿಕೆ ಹಾಗೂ ಬಂದರುಗಳ ಅಭಿವೃದ್ಧಿ, ಶಿಥಿಲೀಕರಣ ಘಟಕಗಳ ಅಭಿವೃದ್ಧಿ ಸೇರಿದಂತೆ ಕಡಲ ಮಕ್ಕಳ ಬದುಕಿಗೆ ಪೂರಕವಾದ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಕರಾವಳಿ ಆರ್ಥಿಕತೆಗೆ ಮತ್ತಷ್ಟು ಬಲ ನೀಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಅರಣ್ಯ ಭೂಮಿ ಸಮಸ್ಯೆ, ಕಡಲ್ಕೊರೆತ, ಕಸ್ತೂರಿರಂಗನ್ ವರದಿ, ಗಣಿಗಾರಿಕೆ, ಕೆಂಪುಕಲ್ಲು ಹಾಗೂ ಮರಳು ಸಮಸ್ಯೆಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದು ಶಾಶ್ವತ ಪರಿಹಾರಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ.
ಮುಖ್ಯಮಂತ್ರಿ ಅವರ ಕನಸಿನ ಕರಾವಳಿ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗಲಿ ಹಾಗೂ ಆಡಳಿತ ವ್ಯವಸ್ಥೆ ಕರಾವಳಿ ಜನರಿಗೆ ಇನ್ನಷ್ಟು ಹತ್ತಿರವಾಗಲಿ ಎಂದು ಪ್ರಸಾದ್ ರಾಜ್ ಕಾಂಚನ್ ಆಶಿಸಿದ್ದಾರೆ.



