ಮಂಗಳೂರು : ಎಚ್1ಎನ್1 ವೈರಸ್ ಸೋಂಕಿನ ಆತಂಕ ಹೆಚ್ಚಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತರನ್ನು ಕಾಸರಗೋಡು ಜಿಲ್ಲೆಯ ಅಜನೂರು ಮಾಣಿಕ್ಕೊಟ್ಟಿಯ ನಿವಾಸಿ ಯಶೋದಾ ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ಅವರಿಗೆ ತೀವ್ರ ಜ್ವರ ಹಾಗೂ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ, ಎಚ್1ಎನ್1 ಸೋಂಕಿನ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಯಶೋದಾ ಮೃತಪಟ್ಟಿದ್ದಾರೆ.
ಈ ನಡುವೆ, ಯಶೋದಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು ಏಳು ಮಂದಿಯಲ್ಲಿ ಜ್ವರ ಹಾಗೂ ಕೆಮ್ಮಿನ ಲಕ್ಷಣಗಳು ಕಂಡುಬಂದಿವೆ.
ಆರೋಗ್ಯ ಇಲಾಖೆ ತಕ್ಷಣವೇ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಸೋಂಕು ದೃಢಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸಿದೆ.




