ಉಡುಪಿ : ಕಟಪಾಡಿ ಕೋಟೆ ಪ್ರದೇಶದಲ್ಲಿ ಸೋಮವಾರ ಸಂಜೆ ಬಾವಿಗೆ ಬಿದ್ದಿದ್ದ ನವಿಲನ್ನು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದರು.
ಕಟಪಾಡಿ ಕೋಟೆ ಸಮೀಪದ ಬಾವಿಯಲ್ಲಿ ನವಿಲು ಬಿದ್ದಿರುವ ಕುರಿತು ಮಾಹಿತಿ ಲಭಿಸಿದ ತಕ್ಷಣ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಕಾರ್ಯಾಚರಣೆಯ ವೇಳೆ ಮಹಾಬಲೇಶ್ವರ ಅವರು ಬಾವಿಗೆ ಇಳಿದು, ನವಿಲನ್ನು ಸುರಕ್ಷಿತವಾಗಿ ಹಿಡಿದು ಮೇಲಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಅಶ್ವಿನ್ ಸನಿಲ್, ಮಹಾಬಲೇಶ್ವರ, ನಾಗೇಶ್ ಪೂಜಾರಿ, ಸುಧೀರ್, ಅಮರ್ ಹಾಗೂ ಗಣೇಶ್ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಿಬ್ಬಂದಿಯ ಸಮಯೋಚಿತ ಸ್ಪಂದನೆ, ತಂಡದ ಸಮನ್ವಯ ಮತ್ತು ಧೈರ್ಯದಿಂದ ನಡೆಸಿದ ಕಾರ್ಯಾಚರಣೆಯ ಫಲವಾಗಿ ನವಿಲನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ಬಾವಿಯಿಂದ ಹೊರತೆಗೆಯಲಾಯಿತು.
ಮಾನವ ಜೀವ ರಕ್ಷಣೆಯ ಜೊತೆಗೆ ಪ್ರಾಣಿ–ಪಕ್ಷಿಗಳ ರಕ್ಷಣೆಯಲ್ಲಿಯೂ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ತೋರಿದ ಕಾಳಜಿ ಹಾಗೂ ಸೇವಾ ಮನೋಭಾವಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.








