ಉಡುಪಿ: ಉಡುಪಿ ನಗರಸಭೆಯಲ್ಲಿ ಆಸ್ತಿತೆರಿಗೆ ಪಾವತಿಯಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪೌರಾಯುಕ್ತ ಮಹಾಂತೇಶ್ ನೀಡಿದ ದೂರಿನ ಪ್ರಕಾರ, ನಗರಸಭೆ ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್‌ನ ನಗರಸಭೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇದೆ. ಫೆಬ್ರವರಿ 3ರಂದು ಪಾವತಿ ವಿವರಗಳ ಪರಿಶೀಲನೆ ವೇಳೆ, ಜನವರಿ 28ರಂದು ಪಾವತಿಯಾಗಿದೆಯೆಂದು ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾದರೂ, ಅದೇ ದಿನಾಂಕದ ಬ್ಯಾಂಕ್ ವಿವರ ಪಟ್ಟಿಯಲ್ಲಿ ಆ ಪಾವತಿ ದಾಖಲಾಗಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ.
ಇದೇ ರೀತಿ ಫೆಬ್ರವರಿ 4ರಂದು ಮತ್ತಷ್ಟು ಪರಿಶೀಲನೆ ನಡೆಸಿದಾಗ, ಬ್ಯಾಂಕ್ ಸೀಲ್ ಹೊಂದಿದ್ದ ಕೆಲವು ಚಲನ್‌ಗಳು ಈಗಾಗಲೇ ಜನವರಿ 28ರಂದು ಜನರೇಟ್ ಆಗಿದ್ದ ಅದೇ ಚಲನ್ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ. ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ದಿನಾಂಕಗಳಲ್ಲಿ ಸೀಲ್ ಹೊಂದಿದ ಚಲನ್‌ಗಳು ದೊರೆತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಯಾರೋ ಆರೋಪಿಗಳು ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಆಸ್ತಿತೆರಿಗೆ ಪಾವತಿಸಿದ ಹಣವನ್ನು ವಂಚನೆ ಮಾಡಿರುವ ಶಂಕೆಯ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/2025ರಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ವೇಳೆ ಸುಪೇಶ್ (25) ಮತ್ತು ಶಾಂತಾ (43) ಎಂಬ ಇಬ್ಬರು ಆರೋಪಿಗಳನ್ನು ಕೃಷ್ಣ ಮಠದ ರಾಜಾಂಗಣ ಸಮೀಪ ಬಂಧಿಸಲಾಗಿದೆ.



