Home Latest ಸೆ.15ರಿಂದ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸಭೆ…!!

ಸೆ.15ರಿಂದ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸಭೆ…!!

ಉಡುಪಿ: ಪ್ರಜಾಪ್ರಭುತ್ವದ ಅನುಸರಣೆಯಲ್ಲಿ ರಾಜ್ಯವು ದೇಶಕ್ಕೆ ಮಾದರಿಯಾಗಿದೆ. ಐತಿಹಾಸಿಕ ಪ್ರಜಾಪ್ರಭುತ್ವದ ಚಲನಶೀಲತೆಯನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸೆ ತಿಳಿಸಲು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ.

ತನ್ನಿಮಿತ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೆ.15ರಂದು ತಾಲೂಕು ಮಟ್ಟದ ಯುವ ಸಂಸತ್ ಸಭೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾಹಿತಿ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಸೆ.11) ಆಯೋಜಿಸಿದ್ದ ಯುವ ಸಂಸತ್ ಸಭೆಯ ಆಯೋಜನೆ ಕುರಿತ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿಯೂ ಯುವ ಸಂಸತ್ ಸಭೆ ಆಯೋಜಿಸಲಾಗುವುದು ಎಂದರು.

ತಾಲೂಕು ಮಟ್ಟದ ಯುವ ಸಂಸತ್ ಸಭೆಗಳ ಸ್ಫರ್ಧೆ ಸೆ.16ರಿಂದ ಆರಂಭವಾಗಲಿದ್ದು, ಅ.10ರ ಒಳಗೆ ಸ್ಪರ್ಧೆ ಪೂರ್ಣಗೊಳ್ಳಬೇಕು. ವಾಕ್ ಚಾತುರ್ಯ ಇರುವ ಮಕ್ಕಳನ್ನು ಪ್ರೇರೇಪಿಸಿ, ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಸಂಸತ್, ವಿಧಾನಸಭೆಯ ಮಾದರಿಯಲ್ಲಿ ಸಭಾಂಗಣ ಸಿದ್ಧಪಡಿಸಬೇಕು.

ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಅ.11ರಿಂದ 30ರ ಒಳಗಾಗಿ ಜಿಲ್ಲಾ ಯುವ ಸಂಸತ್ ಸಭೆ ಆಯೋಜಿಸಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಭೆಯನ್ನು ಜಿಲ್ಲಾ ವಕೀಲರ ಸಂಘದ ಸಹಭಾಗಿತ್ವದಲ್ಲಿ ನಡೆಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್ಪಿ ಸುಧಾಕರ್ ನಾಯಕ್, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಶೆಟ್ಟಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕುಗಳ ತಹಸೀಲ್ದಾರರು, ಇಒಗಳು ಉಪಸ್ಥಿತರಿದ್ದರು.

ಸಂವಿಧಾನ ದಿನಾಚರಣೆ ನ.26ರಂದು ನಡೆಯಲಿದ್ದು ಎಲ್ಲ 224 ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಸಂಸತ್ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಗೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಚರ್ಚೆಯಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆಮಾಡಿ ರಾಜ್ಯ ಮಟ್ಟದ ಯುವ ಸಂಸತ್ ಸಭೆಗೆ ಕಳುಹಿಸಿಕೊಡಲಾಗುವುದು