ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಮೊಹಮ್ಮದ್ ಶಫಿ ಅವರ ಸಿಎಮ್‌ಎಸ್ ಸ್ಟೋನ್ ಕ್ರಶರ್‌ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಬಂಡೆಗಳನ್ನು ತುಂಡರಿಸಿ, ಕ್ರಶರ್ ಮೂಲಕ ಜಲ್ಲಿ ಹಾಗೂ ಎಂ-ಸ್ಯಾಂಡ್ ತಯಾರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಎಎಸ್‌ಪಿ ಕಾರ್ಕಳ ಅವರ ಸೂಚನೆಯಂತೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ದಾಳಿ ವೇಳೆ ಸ್ಥಳದಲ್ಲಿ ಮೂರು ಎಕ್ಸ್ಕವೇಟರ್‌ಗಳು, ಒಂದು ಡಂಪರ್ ಲಾರಿ, ಎರಡು ಖಾಲಿ ಟಿಪ್ಪರ್‌ಗಳು, ಸುಮಾರು 20 ಲೋಡ್ ಜಲ್ಲಿ ಹಾಗೂ ಬಂಡೆ ಕಲ್ಲುಗಳನ್ನು ಪುಡಿ ಮಾಡುವ ದೊಡ್ಡ ಯಂತ್ರಗಳು ಪತ್ತೆಯಾಗಿವೆ. ಅಲ್ಲದೆ, ಎಂ-ಸ್ಯಾಂಡ್ ಲೋಡ್ ಮಾಡಿಕೊಂಡಿದ್ದ KA-18-B-0611 ಲಾರಿಯೂ ಸ್ಥಳದಲ್ಲಿತ್ತು.
ಲಾರಿ ಚಾಲಕ ಜಗದೀಶ್ ಅವರನ್ನು ವಿಚಾರಿಸಿದಾಗ, ಮಾಳಾ ಗ್ರಾಮದ ರಂಜಿತ್ ಅವರು ಕ್ರಶರ್ ನಡೆಸುತ್ತಿದ್ದು, ಪರವಾನಿಗೆ ಇದೆ ಎಂದು ತಿಳಿಸಿ ಜಲ್ಲಿ ಮತ್ತು ಎಂ-ಸ್ಯಾಂಡ್ ತೆಗೆದುಕೊಂಡು ಹೋಗಲು ಹೇಳಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಶೀಲಿಸಿದಾಗ, ಸಿಎಮ್‌ಎಸ್ ಸ್ಟೋನ್ ಕ್ರಶರ್‌ನ ಪರವಾನಿಗೆಯ ಅವಧಿ ಹಲವು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿರುವುದು ತಿಳಿದುಬಂದಿದೆ.
ಮೊಹಮ್ಮದ್ ಶಫಿ ಮತ್ತು ರಂಜಿತ್ ಅವರು ಸಂಘಟಿತರಾಗಿ ಯಾವುದೇ ಪರವಾನಿಗೆ ಇಲ್ಲದೆ ಕ್ವಾರೆಯಿಂದ ಕಲ್ಲುಗಳನ್ನು ತುಂಡರಿಸಿ ಕ್ರಶರ್‌ಗೆ ಸಾಗಿಸಿ, ಪುಡಿ ಮಾಡಿ ಜಲ್ಲಿ ಹಾಗೂ ಎಂ-ಸ್ಯಾಂಡ್ ತಯಾರಿಸಿ ಮಾರಾಟ ಮಾಡುವ ಮೂಲಕ ಸರ್ಕಾರದ ರಾಜಸ್ವಕ್ಕೆ ನಷ್ಟ ಉಂಟು ಮಾಡಿರುವುದು ಕಂಡುಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2026, ಕಲಂ 303(2), 112(1) R/w 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



