ಮಲ್ಪೆ: ಬೋಟಿನಿಂದ ಆಕಸ್ಮಿಕವಾಗಿ ಧಕ್ಕೆ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮೃತರನ್ನು ದಯಾನಂದ ಕೋಡಾರಕರ (59) ಎಂದು ಗುರುತಿಸಲಾಗಿದೆ.
ಇವರು ಕಳೆದ 20 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.ಸೆಪ್ಟೆಂಬರ್ 9ರಂದು ಬೆಳಗ್ಗೆ 5 ಗಂಟೆಗೆ ‘ಶ್ರೀ ಕೃಷ್ಣ ತೀರ್ಥ’ ಹೆಸರಿನ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ದಯಾನಂದ ಅವರು ರಾತ್ರಿ 8 ಗಂಟೆ ಸುಮಾರಿಗೆ ಮಲ್ಪೆ ಬಂದರಿಗೆ ವಾಪಸ್ಸಾಗಿದ್ದರು.
ಬೋಟಿನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿ ಬೋಟ್‌ನ್ನು ಬಂದರಿನಲ್ಲಿ ನಿಲ್ಲಿಸಲಾಗಿತ್ತು.ಇತರ ಮೀನುಗಾರರು ರೂಮಿಗೆ ತೆರಳಿದ ಬಳಿಕ, ದಯಾನಂದ ಅವರು ಮತ್ತೆ ಮೀನುಗಾರಿಕೆ ಕೆಲಸಕ್ಕೆ ತೆರಳಲು ಬಲೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ ವೇಳೆ ಆಕಸ್ಮಿಕವಾಗಿ ಬೋಟಿನಿಂದ ಧಕ್ಕೆ ನೀರಿಗೆ ಬಿದ್ದು ಕಾಣೆಯಾಗಿದ್ದರು.
ಅವರಿಗಾಗಿ ಹುಡುಕಾಟ ನಡೆಸಲಾಗಿದ್ದು, ಸೆಪ್ಟೆಂಬರ್ 10ರಂದು ಬೆಳಗ್ಗೆ 10.10ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



