ಕಾರ್ಕಳ: ಯಾವುದೇ ಪರವಾನಿಗೆ ಪಡೆಯದೆ ಸ್ಫೋಟಕ ಬಳಸಿ ಕಲ್ಲು ಪುಡಿಮಾಡಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ 10ರಂದು ರಾತ್ರಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್. ಅವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಕಲ್ಯಾ ಗ್ರಾಮದ ಕುಂಟಾಡಿ ಮಣ್ಣು ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದನ್ನು ಹಿಂಬಾಲಿಸಿ ಕೋರೆ ಬಳಿ ನಿಲ್ಲಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿ ಎರಡು ಲಾರಿಗಳು ಕಲ್ಲುಗಳನ್ನು ಲೋಡ್ ಮಾಡಿಕೊಂಡು ನಿಂತಿದ್ದು, ಕೋರೆಯ ಪಕ್ಕದಲ್ಲಿ ಇಟಾಚಿ ವಾಹನ ಕೂಡ ಪತ್ತೆಯಾಗಿದೆ. ಸ್ಥಳದಲ್ಲಿದ್ದವರನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಪಡೆಯದೆ ಸ್ಫೋಟಕ ಬಳಸಿ ಕಲ್ಲುಗಳನ್ನು ಪುಡಿಮಾಡಿ ಸಾಗಾಟ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಈ ಸಂಬಂಧ ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಸೇರಿದಂತೆ ಇತರರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2026ರಂತೆ ಬಿಎನ್‌ಎಸ್ ಕಲಂ 288 ಜೊತೆಗೆ 3(5) ಹಾಗೂ ಸ್ಫೋಟಕ ಕಾಯ್ದೆಯ ಕಲಂ 9(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




