ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಬೆಟ್ಟು ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತಪಟ್ಟ ಯುವಕ ಸಾೖಬ್ರಕಟ್ಟೆ ಗರಿಕೆಮಠ ಮೂಲದ ಸಾಮರಾಜ್ (21) ಎಂದು ತಿಳಿದು ಬಂದಿದೆ.
ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸಾಮರಾಜ್, ಜೂನ್ 13ರ ಶನಿವಾರ ಸಂಜೆ ಸುಮಾರು 4.30ರ ವೇಳೆಗೆ ಆರ್ಬೆಟ್ಟು ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ಅವರು ಮುಳುಗಿ ನಾಪತ್ತೆಯಾಗಿದ್ದರು.
ವಿದ್ಯಾರ್ಥಿ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡ ತಕ್ಷಣವೇ ಶೋಧ ಕಾರ್ಯಾಚರಣೆಗೆ ಇಳಿಯಿತು. ಭಾನುವಾರ ಬೆಳಗ್ಗಿನಿಂದಲೇ ಭಾರೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದ ತಂಡ, ಆಕ್ಸಿಜನ್ ಸಿಲಿಂಡರ್ ಬಳಸಿ ಹೊಳೆಯ ಆಳಕ್ಕೆ ಇಳಿದು ತೀವ್ರ ಹುಡುಕಾಟ ಮುಂದುವರಿಸಿತು.
ತಂಡದ ನಿರಂತರ ಮತ್ತು ದಣಿವರಿಯದ ಕಾರ್ಯಾಚರಣೆಯ ಫಲವಾಗಿ ರವಿವಾರ ಬೆಳಗ್ಗೆ ಸುಮಾರು 9.24ರ ವೇಳೆಗೆ ಹೊಳೆಯ ಮಧ್ಯಭಾಗದಲ್ಲಿ ಸಾಮರಾಜ್ ಅವರ ಮೃತದೇಹ ಪತ್ತೆಯಾಗಿದೆ. ಹುಡುಕಾಟ ನಡೆಸಿದ ನದಿಯ ಅಲ್ಪ ದೂರದಲ್ಲೇ ಶವ ಸಿಕ್ಕಿರುವುದಾಗಿ ವರದಿಯಾಗಿದೆ.
ಘಟನಾ ಸ್ಥಳದಲ್ಲಿ ಸ್ಥಳೀಯರು ಹಾಗೂ ಪೊಲೀಸರು ಜಮಾಯಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಜರುಗಿವೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಜೀವನ್ ಮಿತ್ರ ಆಂಬುಲೆನ್ಸ್‌ನ ನಾಗರಾಜ್ ಪುತ್ರನ್ ಕೋಟ ಅವರು ಮಾನ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರಲ್ಲಿ ಪ್ರಮುಖ ಕೋರಿಕೆಯೊಂದನ್ನು ಇಟ್ಟಿದ್ದಾರೆ.
ರಾಜ್ಯದ ಪ್ರತಿಯೊಂದು ಅಗ್ನಿಶಾಮಕ ದಳದ ತಂಡದಲ್ಲಿ ಕಡ್ಡಾಯವಾಗಿ ಸ್ಕೂಬಾ ಡೈವಿಂಗ್ (ಮುಳುಗು ತಜ್ಞರ) ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಅದಕ್ಕೆ ಬೇಕಾದ ಅತ್ಯಾಧುನಿಕ ಪರಿಕರಗಳನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ಯಾರಾದರೂ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದಾಗ ತಕ್ಷಣವೇ ಕಾರ್ಯಪ್ರವೃತ್ತರಾಗಿ ಜೀವ ಉಳಿಸಲು ಅಥವಾ ಪತ್ತೆ ಹಚ್ಚಲು ಮುಳುಗು ತಜ್ಞರ ಅಗತ್ಯವಿದೆ. ಇಲ್ಲವಾದಲ್ಲಿ ಪ್ರತಿ ಬಾರಿಯೂ ಈಶ್ವರ್ ಮಲ್ಪೆಯಂತಹ ಮಹನೀಯರ ಆಗಮನಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅಗ್ನಿಶಾಮಕ ಸಿಬ್ಬಂದಿ ಕೇವಲ ಬೆಂಕಿ ಆರಿಸುವುದಕ್ಕೆ ಮಾತ್ರ ಸೀಮಿತವಾಗದೆ, ನೀರಿನಲ್ಲಿ ಬಿದ್ದವರನ್ನು ರಕ್ಷಿಸುವ ಮತ್ತು ಶವಗಳನ್ನು ಮೇಲಕ್ಕೆತ್ತುವ ಕಾರ್ಯದಲ್ಲೂ ತೊಡಗಿಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಅಗ್ನಿಶಾಮಕ ತಂಡದಲ್ಲಿ ಇಂತಹ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಮುಳುಗು ತಜ್ಞರಾಗಲಿ ಅಥವಾ ಅದಕ್ಕೆ ಬೇಕಾದ ಅಗತ್ಯ ಪರಿಕರಗಳಾಗಲಿ ಇಲ್ಲದಿರುವುದು ಖೇದನೀಯವಾಗಿದೆ.ಆದ್ದರಿಂದ ಮಾನ್ಯ ಸಚಿವರು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಅಗ್ನಿಶಾಮಕ ದಳದ ತಂಡಗಳಿಗೆ ಮುಳುಗು ತಜ್ಞರನ್ನು ಮತ್ತು ಸ್ಕೂಬಾ ಡೈವಿಂಗ್ ಪರಿಕರಗಳನ್ನು ಒದಗಿಸಬೇಕೆಂದು ಸಾರ್ವಜನಿಕರ ಪರವಾಗಿ ನಾಗರಾಜ್ ಪುತ್ರನ್ ಒತ್ತಾಯಿಸಿದ್ದಾರೆ.






