ಉಡುಪಿ: ಉದ್ಯೋಗದ ಸಮಸ್ಯೆಯಿಂದ ಮನನೊಂದು 29 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಮೃತರನ್ನು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ನಿವಾಸಿ ಅಜಯರಾಜ್ (29) ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಅಜಯರಾಜ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ 2025ರಲ್ಲಿ ಕೆಲಸ ತೊರೆದು ಊರಿಗೆ ಮರಳಿದ್ದರು.
ನಂತರ ಉದ್ಯೋಗದ ಹುಡುಕಾಟಕ್ಕಾಗಿ ಉಡುಪಿಗೆ ಆಗಮಿಸಿ, ಬನ್ನಂಜೆಯ ಟೈಗರ್ ಪಿಜಿಯಲ್ಲಿ ವಾಸವಾಗಿದ್ದು, ಸ್ಥಳೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಬಳಿಕ ಕೆಲಸ ಬಿಡುವುದಾಗಿ ಅವರು ತಂದೆಗೆ ಫೋನ್ ಮೂಲಕ ತಿಳಿಸಿದ್ದರು ಎನ್ನಲಾಗಿದೆ.
ಉದ್ಯೋಗದ ಸಮಸ್ಯೆ ಅಥವಾ ಇನ್ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡ ಅಜಯರಾಜ್, ಆಗಸ್ಟ್ 7ರಂದು ರಾತ್ರಿ ಪಿಜಿಯಲ್ಲಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ತಂದೆ ದೇವೀಂದ್ರಪ್ಪ ಯಂಗನ ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




