ಉಡುಪಿ : ನಗರದ ಆದಿಉಡುಪಿ ಸಂತೆ ಮಾರ್ಕೆಟ್ ನ ಎ.ಪಿ.ಎಂ.ಸಿ. ಅಧಿಕಾರಿಗಳ ದೌರ್ಜನ್ಯ ಮತ್ತು ಅವ್ಯವಹಾರಗಳ ವಿರುದ್ಧ ಇಂದು ಎ.ಪಿಎಂ.ಸಿ ರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.
“ನಾವು ಸುಮಾರು ಮೂರು ವರ್ಷ ಏಳು ತಿಂಗಳುಗಳಿಂದ ಉಡುಪಿ ಎ.ಪಿ.ಎಂ.ಸಿ. ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದಿರುತ್ತೇವೆ. ಈಗ ಇರುವ ಒಬ್ಬ ಲೆಕ್ಕಿಗ ಹಾಗೂ ಕಾರ್ಯದರ್ಶಿಯವರು ಸೇರಿ ಲಕ್ಷಾಂತರ ರೂಪಾಯಿ ಅವ್ಯವಹಾರವನ್ನು ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ನಮ್ಮ ಬಳಿ ಇರುತ್ತದೆ. ಸರಕಾರಿ ವಾಹನವನ್ನು ಇದೇ ಲೆಕ್ಕಿಗ ಮತ್ತು ಡ್ರೈವರ್ ಸೇರಿ ತಮ್ಮ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದಾರೆ.
ಖಾಲಿ ನಿವೇಶನ ಎಂದು ಹೇಳಿ ಅಭಿವೃದ್ಧಿಪಡಿಸಿದ ನಿತ್ಯಮಾರುಕಟ್ಟೆ ನಿವೇಶನವನ್ನು ಲೀಸ್ & ಸೇಲ್ ಹೆಸರಿನಲ್ಲಿ ತಮಗೆ ಬೇಕಾದವರಿಗೆ ಕಡಿಮೆ ಬೆಲೆಯಲ್ಲಿ ಮಾರಲಾಗಿದೆ. ಈ ನಿವೇಶನವನ್ನು ಅಭಿವೃದ್ಧಿಪಡಿಸಿ 16 -06-2020 ರಂದು ಅಂದಿನ ಉಡುಪಿಯ ಶಾಸಕರು ಮತ್ತು ಸಂಸದರು ಸೇರಿ ಉದ್ಘಾಟನೆ ಮಾಡಿರುತ್ತಾರೆ. ಈ ನಿವೇಶನದಲ್ಲಿರುವ ಸುಮಾರು ನಲವತ್ತು ಲಕ್ಷ ರೂಪಾಯಿ ಮೌಲ್ಯದ ಇಂಟರ್ಲಾಕ್ ಮತ್ತು ಶೆಡ್ಗಳು ಮತ್ತು ಬೆಲೆಬಾಳುವ ಮರಗಳನ್ನು ಕೆಲವು ಗೂಂಡಾಗಳು ಸೇರಿ ನಾಶಪಡಿಸಿರುತ್ತಾರೆ. ಇವರೊಂದಿಗೆ ಇದೇ ಲೆಕ್ಕಿಗ ಶಾಮೀಲಾಗಿರುತ್ತಾನೆ.
ಇದೇ ಅಭಿವೃದ್ಧಿಪಡಿಸಿದ ನಿತ್ಯಮಾರುಕಟ್ಟೆಯಲ್ಲಿ ಕಟ್ಟುತ್ತಿರುವ ದಾಸ್ತಾನು ಮಳಿಗೆಗಳನ್ನು ನಾಲ್ಕುಜನ ವರ್ತಕರು 1. ಪ್ರಕಾಶ್ ಸಜ್ಜನ್, 2. ರುದ್ರಗೌಡ, 3. ಸಂಗಮೇಶ 4 . ಶಾಕಿಬ್ ಸೇರಿ ಕಾಮಗಾರಿಯ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡವನ್ನು ಕಟ್ಟುತ್ತಿದ್ದಾರೆ. ನಾವು ಅಧಿಕಾರಿಗಳ ಹತ್ತಿರ ಹಲವುಬಾರಿ ದೂರು ಕೊಟ್ಟರೂ ಶರತ್ತುಗಳ ಪ್ರಕಾರ ಈ ಅಕ್ರಮ ಹಂಚಿಕೆಯನ್ನು ಕಾಮಗಾರಿಯನ್ನು ರದ್ದು ಪಡಿಸುತ್ತಿಲ್ಲ.
ಈ ಜಾಗದಲ್ಲಿರುವ ಒಂದು ದೇವರ ಮರ (ಅತ್ತಿಮರ) ವನ್ನು ಯಾರೋಕಿಡಿಗೇಡಿಗಳು ರಾಸಾಯನಿಕ ಬಳಸಿಕೊಂದಿರುತ್ತಾರೆ. ನಾವು ದೂರುಕೊಟ್ಟರೂ ಇದುವರೆಗೆ ಕ್ರಮಕೈಗೊಂಡಿಲ್ಲ. ಇಲ್ಲಿ ಇರುವ ಸುಮಾರು 175 ನಿತ್ಯ ಹರಾಜು ಕಟ್ಟೆಗಳಲ್ಲಿ ಕೆಲವು ಕಡೆಗಳಲ್ಲಿ ಕೆಲವು ವರ್ತಕರು ಯಾವುದೇ ಪರವಾನಗಿ ಪಡೆಯದೆ ವ್ಯಾಪಾರಮಾಡುತ್ತಿದ್ದಾರೆ. ರಾತ್ರಿ ಸುಮಾರು ಮೂರು ಗಂಟೆಯಿಂದ ಮುಂಜಾನೆ ಸುಮಾರು ಎಂಟು ಗಂಟೆಯ ವರೆಗೆ ಪರವಾನಗಿ ಇಲ್ಲದ ವ್ಯಾಪಾರ ನಡೆಯುತ್ತದೆ.
ಇಲ್ಲಿ ಇರುವ ಸುಮಾರು 175 ಕಟ್ಟೆಗಳಲ್ಲಿ ಸುಮಾರು ದಿನಕ್ಕೆ ಒಂದು ಕೋಟಿಯಷ್ಟು ವ್ಯಾಪಾರವಾಗುತ್ತದೆ ಎಂದು ಇದೇ ವರ್ತಕರು ಹೇಳುತ್ತಿದ್ದಾರೆ. ಇವರು ಹೇಳುವ ಪ್ರಕಾರ ಮಾರುಕಟ್ಟೆ ಶುಲ್ಕ ( 0.6% ) ವಾರ್ಷಿಕ ಸುಮಾರು 11 ಕೋಟಿ ರೂಪಾಯಿ ಸರಕಾರದ ಬೊಕ್ಕಸಕ್ಕೆ ಬರಬೇಕು. ಯಾವುದೇ ಒಂದು ರೂಪಾಯಿ ಸರಕಾರಕ್ಕೆ ಬರುತ್ತಿಲ್ಲ.
ಇಲ್ಲಿ ಇರುವ ಸುಮಾರು 175 ಹರಾಜು ಕಟ್ಟೆಯಲ್ಲಿ ಬರುವ ಬಾಡಿಗೆ ದಿನಕ್ಕೆ 12000 ರೂಪಾಯಿ ( ಸುಮಾರು 60 ) ಕಟ್ಟೆಗಳಿಂದ ಎಂದು ತೋರಿಸುತ್ತಿದ್ದಾರೆ. ಹಾಗಾದರೆ ಉಳಿದ ನೂರಾ ಹದಿನೈದುಕಟ್ಟೆಗಳ ನಿತ್ಯ ಬಾಡಿಗೆ ಎಲ್ಲಿಗೆ ಹೋಗಿರುತ್ತದೆ? ಇವರು ಒಂದು ಕಟ್ಟೆಗೆ ನಿತ್ಯವೂ ಇನ್ನೂರು ರೂಪಾಯಿ ವಸೂಲು ಮಾಡುತ್ತಿದ್ದಾರೆ. ಈ ವ್ಯವಹಾರದಲ್ಲಿ ತಿಂಗಳಿಗೆ ಎರಡು ಲಕ್ಷದಷ್ಟು ಸರಕಾರೀ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು ಈ ಮಾರುಕಟ್ಟೆ ಶುಲ್ಕವನ್ನು ಲೆಕ್ಕಿಗ ಸಂಗ್ರಹಿಸಬೇಕು ಆದರೆ ಈ ಮಾರುಕಟ್ಟೆಯಲ್ಲಿನ ಸಂಗ್ರಹವನ್ನು ಯಾರೋ ಹೊರಗುತ್ತಿಗೆಯವರ ಸಹಾಯದಿಂದ ಮಾಡಿಸಲಾಗುತ್ತಿದೆ. ಉಡುಪಿ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ದಿನದ 24 ಗಂಟೆಗಳೂ ಅವ್ಯವಹಾರಗಳು ಜುಗಾರಿ ದಂದೆಗಳು ನಡೆಯುತ್ತಿರುತ್ತವೆ.
ಭದ್ರತಾ ಸಿಬ್ಬಂದಿಗಳು ಸರಿಯಾಗಿ ಕೆಲಸವನ್ನು ಮಾಡುತ್ತಿಲ್ಲ. ಒಳಗೆ ಕಳ್ಳಕಾಕರು ತುಂಬಿಕೊಂಡಿದ್ದಾರೆ. ಇಲ್ಲಿ 24 ಮತ್ತು 25ನೇ ಇಸವಿಯ ಅವಧಿಯಲ್ಲಿ ಸುಮಾರು ಏಳು ಮಂದಿಯ ಹೆಣಗಳು ಸಿಕ್ಕಿರುತ್ತದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಇವರಬಳಿ ಇರುವುದಿಲ್ಲ ಮತ್ತು ಉಡುಪಿ ಎ.ಪಿ.ಎಂ.ಸಿ ಜಾಗಕ್ಕೆ ಮೂಲದಾಖಲೆಗಳೂ ಇರುವುದಿಲ್ಲ. ತಾವು ಇದನ್ನೆಲ್ಲಾ ಪರಿಶೀಲಿಸಿ ಇಲ್ಲಿನ ಭ್ರಷ್ಟಾಚಾರವನ್ನು ನಿಲ್ಲಿಸಿ ಅದಿಉಡುಪಿಯ ಎ.ಪಿ.ಎಂ.ಸಿ. ಮಾರುಕಟ್ಟೆಯನ್ನು ರಕ್ಷಿಸಬೇಕು ಮತ್ತು ಸಾಮಾನ್ಯವರ್ತಕರಿಗೆ ಮತ್ತು ಗ್ರಾಹಕರಿಗೆ ನ್ಯಾಯವನ್ನು ಒದಗಿಸಿಕೊಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ” ಎಂದು ಎ.ಪಿ.ಎಂ.ಸಿ ರಕ್ಷಣಾ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.
ವಿಜಯಾ ಕೊಡಊರು : A.P.M.C. ರಕ್ಷಣಾಸಮಿತಿಯ ಅಧ್ಯಕ್ಷರು, ಸುಭಾಷಿತ್ ಕುಮಾರ್ : ಕೃಷಿಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷರು,ಮಧುಕರ ಮುದ್ರಾಡಿ : ಉಡುಪಿ ಬಿಜೆಪಿ ಜಿಲ್ಲಾ ವಕ್ತಾರರು, ನಟೇಶ್ : ಜನಧ್ವನಿ ಉಡುಪಿ, ರಮಾಕಾಂತ್ ಕಾಮತ್ : A.P.M.C. ಸದಸ್ಯರು,ಪ್ರಭುಗೌಡ , ಫಯಾಜ್ , ಜಗಳೂರಯ್ಯ ರಮಾನಾಥ ಪೈ , ವರ್ತಕರು ,ರಾಧಾಕೃಷ್ಣ ಮಲ್ಪೆ ಮತ್ತು ನಾಗರಿಕರು ಹಾಗೂ ಗ್ರಾಹಕರು ಉಡುಪಿ ಇವರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





