ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ವಿವಿಧ ಆಕರ್ಷಕ ವೇಷಗಳ ನಡುವೆ ಮಲೇರಿಯಾ ಜಾಗೃತಿ ಮೂಡಿಸುವ ಸೊಳ್ಳೆ ಹಾಗೂ ನರ್ಸ್ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆದರು.
ರಥಬೀದಿಯಲ್ಲಿ ಸಂಚರಿಸಿದ ವೇಷಧಾರಿಗಳು ಸಾರ್ವಜನಿಕರಲ್ಲಿ ಮಲೇರಿಯಾ ರೋಗದ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಸೊಳ್ಳೆಯ ವೇಷದೊಂದಿಗೆ ನರ್ಸ್ ವೇಷಧಾರಿಯೊಬ್ಬರು ವಿಶಿಷ್ಟ ರೀತಿಯಲ್ಲಿ ಜಾಗೃತಿ ಸಂದೇಶ ಸಾರಿದರು.
ನರ್ಸ್ ವೇಷಧಾರಿ ಒಂದು ಕೈಯಲ್ಲಿ ಇಂಜೆಕ್ಷನ್ ಹಿಡಿದುಕೊಂಡಿದ್ದರೆ, ಇನ್ನೊಂದು ಕೈಯಲ್ಲಿ ಮಲೇರಿಯಾ ರೋಗದ ಮುಂಜಾಗ್ರತಾ ಕ್ರಮಗಳು ಹಾಗೂ ನಿಯಂತ್ರಣದ ಕುರಿತು ಮಾಹಿತಿ ನೀಡುವ ಫಲಕವನ್ನು ಹಿಡಿದಿದ್ದರು.
ವಿಟ್ಲಪಿಂಡಿ ಸಂಭ್ರಮಕ್ಕೆ ಮನರಂಜನೆಯ ಜೊತೆಗೆ ಸಾಮಾಜಿಕ ಜಾಗೃತಿಯ ಸ್ಪರ್ಶ ನೀಡಿದ ಈ ವಿನೂತನ ವೇಷಗಳು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.





