ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ ಐದು ದಿನ ಕಳೆದರೂ ಆರೋಪಿ ಅದ್ದು ಪಡೀಲ್‌ನನ್ನು ಬಂಧಿಸದಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾನ್ಯ ಪ್ರಕರಣಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆ, ಈ ಗಂಭೀರ ಪ್ರಕರಣದಲ್ಲಿ ನಿಷ್ಕ್ರಿಯವಾಗಿದೆ. ಆರೋಪಿ ವಿಚಾರದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರು ಮೃದು ಧೋರಣೆ ತಳೆದಿದ್ದು, ಆರೋಪಿಗೆ ಆಶ್ರಯ ನೀಡುತ್ತಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಶಾಸಕರ ಭವನದಲ್ಲಿರುವ ಶಾಸಕರ ನಿವಾಸ ಸೇರಿದಂತೆ ಶಂಕಿತ ಸ್ಥಳಗಳಲ್ಲಿ ಪೊಲೀಸರು ತಕ್ಷಣ ಶೋಧ ನಡೆಸಬೇಕು’ ಎಂದು ಆಗ್ರಹಿಸಿದರು.
‘ಅದ್ದು ಪಡೀಲ್ ಈ ಹಿಂದೆ ಕೋಮುಪ್ರಚೋದನೆ, ಮಹಿಳೆಯರಿಗೆ ನಿಂದನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೊ ಹಂಚಿಕೆ ಮುಂತಾದ ಹಲವು ಸಮಾಜವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಶಾಸಕರು ಅವರ ಪರವಾಗಿ ನಿಂತಿದ್ದಾರೆ. ಈಗ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರೂ ಬಂಧಿಸದೇ ಇರುವುದು ಕಾನೂನು ಸುವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸಿದೆ’ ಎಂದರು.
ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಕ್ಷಣ ಆರೋಪಿಯನ್ನು ಬಂಧಿಸಿ ಸಂತ್ರಸ್ತ ಬಾಲಕಿಗೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದರು.





