ಮಂಗಳೂರು : ಐದು ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಜಗಳ ಕಾದು ನೆರೆಮನೆಯ ದಂಪತಿಯನ್ನು ಅಟ್ಟಾಡಿಸಿ ಕೊಂದು ಹಾಕಿದ್ದ ಮುಲ್ಕಿಯ ವ್ಯಕ್ತಿಯೊಬ್ಬನಿಗೆ ಮಂಗಳೂರಿನ ಎರಡನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ನಿವಾಸಿ ಅಲ್ಫೋನ್ಸ್ ಸಲ್ದಾನ (65) ಶಿಕ್ಷೆಗೀಡಾದ ವ್ಯಕ್ತಿ.
2020ರ ಎಪ್ರಿಲ್ 29ರಂದು ಆರೋಪಿ ಆಲ್ಫೋನ್ಸ್ ಸಲ್ದಾನ ಎಂಬಾತ ತನ್ನ ನೆರೆಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜಾ ಜೊತೆಗೆ ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿದ್ದ. ಬಳಿಕ ವಿನ್ಸೆಂಟ್ ಡಿಸೋಜಾನನ್ನು ರಾಜಿ ಪಂಚಾಯತಿಕೆ ಮಾಡುವ ನೆಪದಲ್ಲಿ ತನ್ನ ಮನೆಗೆ ಕರೆಸಿ ಗಲಾಟೆ ಮಾಡಿ ಚೂರಿಯಿಂದ ತಿವಿದು ಕೊಲೆ ಮಾಡಿದ್ದ. ಈ ವೇಳೆ, ರಕ್ಷಿಸಲು ಧಾವಿಸಿ ಬಂದ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜಾನ ಪತ್ನಿ ಶ್ರೀಮತಿ ಹೆಲೆನ್ ಡಿ.ಸೋಜಾ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನೂ ಅಟ್ಟಾಡಿಸಿ ಚೂರಿಯಿಂದ ಅಮಾನುಷವಾಗಿ ತಿವಿದು ಕೊಲೆಗೈದಿದ್ದ.
ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 31/2020 ಕಲಂ 341, 504, 506, 302 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಅಂದಿನ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಮುಲ್ಕಿ ಪೊಲೀಸ್ ಠಾಣೆಯ ಎಎಸ್ಐ ಉಮೇಶ್ ಕೆ ಹಾಗೂ ಹೆಚ್ ಸಿ ವಾದಿರಾಜ ಅವರು ತನಿಖೆಗೆ ಸಹಕರಿಸಿರುತ್ತಾರೆ. ಸದ್ರಿ ಪ್ರಕರಣದ ಬಗ್ಗೆ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ವಿಚಾರಣೆ ನಡೆಸಿದ್ದು ಪ್ರಸ್ತುತ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಅರೋಪಿಗೆ ಜ.19ರಂದು ಜೀವಾವಧಿ ಶಿಕ್ಷೆಯನ್ನು ವಿಧಿಸಿರುತ್ತಾರೆ.
ಅಲ್ಲದೆ, ಆರೋಪಿಗೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಸಾಕ್ಷಿ ವಿಚಾರಣೆ ಸಮಯ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಸಂತ್ರಸ್ತರ ಪರ ವಾದ ಮಂಡಿಸಿರುತ್ತಾರೆ.



