ಬೆಂಗಳೂರು : ಬಹುದಿನಗಳ ಬೇಡಿಕೆಯಂತೆ ಮಂಗಳೂರು ರೈಲ್ವೇ ನಿಲ್ದಾಣವನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ವಿಭಜಿಸಿ ಮೈಸೂರು ರೈಲ್ವೇ ವಿಭಾಗಕ್ಕೆ ಸೇರಿಸುವ ಭಾರತ ಸರಕಾರದ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಹಾಗೂ ಕೇಂದ್ರ ಸರಕಾರವನ್ನು ಅಭಿನಂದಿಸುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ. ಎ ನಾರಾಯಣ ಗೌಡ ತಿಳಿಸಿದ್ದಾರೆ.
ಈ ಮಹತ್ವದ ನಿರ್ಧಾರದ ಹಿಂದೆ ಕೆಲಸ ಮಾಡಿದ ರೈಲ್ವೇ ಸಚಿವ ವಿ. ಸೋಮಣ್ಣ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ವೈಯಕ್ತಿಕವಾಗಿ ಅಭಿನಂದಿಸುತ್ತದೆ. ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಆದರೆ, ಮಂಗಳೂರನ್ನು ಪಾಲಕ್ಕಾಡ್ ವಿಭಾಗದಿಂದ ವಿಭಜಿಸಿ ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿಸಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಕೇರಳದ ಮುಖ್ಯಮಂತ್ರಿ ಸೇರಿದಂತೆ ಅಲ್ಲಿನ ಹಲವು ರಾಜಕಾರಣಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಗಮನಕ್ಕೆ ಬಂದಿದೆ.
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಶಶಿ ತರೂರ್ ಸೇರಿದಂತೆ ಕೇರಳದ ಹಲವು ಲೋಕಸಭಾ ಸದಸ್ಯರು ಈ ನಿರ್ಧಾರದ ವಿರುದ್ಧ ಧ್ವನಿ ಎತ್ತುತ್ತಿರುವುದು ಗಮನಾರ್ಹವಾಗಿದೆ.
ಕೇರಳದ ರಾಜಕಾರಣಿಗಳು ತಮ್ಮ ರಾಜ್ಯದ ಹಿತಾಸಕ್ತಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸರಕಾರ ಹಾಗೂ ಕರ್ನಾಟಕದ ಬಹುತೇಕ ರಾಜಕೀಯ ನಾಯಕರು ಈ ವಿಚಾರದಲ್ಲಿ ಮೌನವಾಗಿರುವುದು ದುರದೃಷ್ಟಕರ. ಕರ್ನಾಟಕದ ಹಿತಾಸಕ್ತಿಯ ವಿಚಾರದಲ್ಲಿ ನಮ್ಮ ರಾಜಕಾರಣಿಗಳ ನಾಡಪರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ.
ಪಕ್ಷಗಳ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ನಾಡು ಮತ್ತು ನುಡಿಯ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಕರ್ನಾಟಕದ ಹಕ್ಕು, ಸಂಪನ್ಮೂಲ ಹಾಗೂ ಹಿತಾಸಕ್ತಿಯ ಪ್ರಶ್ನೆ ಎದುರಾದಾಗ ಪಕ್ಷಾತೀತವಾಗಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ.
ಕರ್ನಾಟಕದ ರಾಜಕಾರಣಿಗಳು ಕರ್ನಾಟಕದ ಪರವಾಗಿ ಒಗ್ಗಟ್ಟಿನಿಂದ ನಿಂತರೆ ಮಾತ್ರ ದೆಹಲಿಯಲ್ಲಿ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ಯಾವುದೇ ಲಾಬಿಗೆ ಸೂಕ್ತ ಉತ್ತರ ನೀಡಲು ಸಾಧ್ಯ. ಕರ್ನಾಟಕದ ವಿರುದ್ಧದ ಯಾವುದೇ ಲಾಬಿಗೆ ದೆಹಲಿಯಲ್ಲಿ ಅವಕಾಶ ಮಾಡಿಕೊಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಎಂದಿಗೂ ಸಹಿಸುವುದಿಲ್ಲ.
ಮಂಗಳೂರು ರೈಲ್ವೇ ನಿಲ್ದಾಣವನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವ ನಿರ್ಧಾರವನ್ನು ಸ್ವಾಗತಿಸುವುದರ ಜೊತೆಗೆ, ಈ ನಿರ್ಧಾರದ ವಿರುದ್ಧ ನಡೆಯುವ ಯಾವುದೇ ಪ್ರಯತ್ನಕ್ಕೆ ಕರ್ನಾಟಕ ಸರಕಾರ ಮತ್ತು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಪ್ರತಿಕ್ರಿಯಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ನಾಡು-ನುಡಿಯ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯೇ ಎಲ್ಲಕ್ಕಿಂತ ಮುಖ್ಯ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷದ ನಾಯಕರು ಮೌನ ವಹಿಸದೆ, ಕರ್ನಾಟಕದ ಪರವಾಗಿ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜಾಧ್ಯಕ್ಷರಾದ ಟಿ.ಎ ನಾರಾಯಣ ಗೌಡ ತಿಳಿಸಿದ್ದಾರೆ.




