ಬೆಂಗಳೂರು: ಬೆಂಗಳೂರಿನಲ್ಲಿ ಲೋಕಾಯುಕ್ತ ಭರ್ಜರಿ ಬೇಟೆಯಾಡಿದೆ. ಬಾರ್ ಲೈಸೆನ್ಸ್ ಪಡೆಯಲು ಬರೋಬ್ಬರಿ 2 ಕೋಟಿಗೂ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಅಬಕಾರಿ ಡಿಸಿ ಜಗದೀಶ್ ನಾಯಕ್, ಚಾಲಕ ಲಕ್ಕಪ್ಪ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಭವನದಲ್ಲಿ ಧಿಡೀರ್ ರೇಡ್ ಮಾಡಿದ ಲೋಕಾಯುಕ್ತ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದೆ.
ದೂರುದಾರ ಲಕ್ಷ್ಮಿ ನಾರಾಯಣ ತಮ್ಮ ಮಗನಿಗಾಗಿ ಬಾರ್ ಓಪನ್ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಸಿಎಲ್7 ಮತ್ತು ಮೈಕ್ರೋ ಬ್ರೈವರಿ ಲೈಸೆನ್ಸ್‌ಗೆ ಸರ್ಕಾರಿ ಫೀಸ್ 21 ಲಕ್ಷ ಕೂಡ ಪಾವತಿಸಿದ್ದರು. ಆದರೆ ಈ ಎರಡು ಲೈಸೆನ್ಸ್‌ಗಳನ್ನ ಕೊಡಲು ಬೆಂಗಳೂರು ನಗರ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಬರೋಬ್ಬರಿ 2.30 ಕೋಟಿ ರೂ. ಲಂಚ ಕೇಳಿದ್ದಾರೆ. ಅದರಲ್ಲಿ 50 ಲಕ್ಷ ರೂ. ಅಡ್ವಾನ್ಸ್ ಕೊಡಲು ಹೇಳಿದ್ದರು. ಇದರಿಂದ ಲಕ್ಷ್ಮೀನಾರಾಯಣ ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.



