ಉಡುಪಿ: ಉದ್ಯಮಿ ಡೇವಿಡ್ ಹತ್ಯೆ ಪ್ರಕರಣದ ತನಿಖೆ ವೇಳೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಆರೋಪಿ ಗಾಯಗೊಂಡಿದ್ದಾನೆ.
ಬಂಧಿತ ಆರೋಪಿ ಅನುಜ್ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನಿಖೆ ಮುಂದುವರೆದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲು ಹೋದಾಗ ಈ ಘಟನೆ ನಡೆದಿದೆ.
ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ: ಈ ಪ್ರಕರಣದ ತನಿಖೆ ಸಂಬಂಧ ನಂಜ ನಾಯಕ್ ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಠಾಣೆ ಮತ್ತು ವಿನಯ್, ಪೊಲೀಸ್ ಉಪನಿರೀಕ್ಷಕರು ಕೊಲ್ಲೂರು ಠಾಣೆ ಮತ್ತು ತಂಡ ಈ ದಿನ ಬೆಳಿಗ್ಗೆ 6-6.30 ಸಮಯದಲ್ಲಿ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೇವಿಡ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಮೂವರು ಶೂಟರ್ ಗಳನ್ನು ಕಳುಹಿಸಿದ ಆರೋಪಿ ಮುಂಬೈನ ನಟೋರಿಯಸ್ ಗ್ಯಾಂಗ್ ಸ್ಟರ್ ಅನುಜ್ ಪಾಟೀಲ್(35) ತಂದೆ: ಕಮಲೇಶ್ವರ ಪಾಟೀಲ್, ಸಾರ್ಮರ್, ನಳಂದ, ಬಿಹಾರ ಈತನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಯನ್ನು ದಸ್ತಗಿರಿ ಮಾಡಿ ಕರೆದುಕೊಂಡು ಬರುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿ, ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ರವರ ಆಯುಧವನ್ನು ಕಸಿದು, ಫೈಯರ್ ಮಾಡಿದ್ದು, ಈ ಸಮಯದಲ್ಲಿ ಕುಂದಾಪುರ ಪೊಲೀಸ್ ಉಪನಿರೀಕ್ಷಕರಾದ ನಂಜ ನಾಯಕರವರು ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿರುತ್ತಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರ ಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆರೋಪಿಯು ಮುಂಬೈ ನಲ್ಲಿ ಕಾರ್ಯಾಚರಿಸುತ್ತಿದ್ದು 2017 ರಿಂದ ತಲೆಮರಿಸಿಕೊಂಡಿರುತ್ತಾನೆ. ಈತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆ ದಾಖಲಿಸಲಾಗಿರುತ್ತದೆ. ಇತನ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 10 ಪ್ರಕರಣಗಳಲ್ಲಿ 10 ಪ್ರಕರಣಗಳು Arms act ಪ್ರಕರಣಗಳಾಗಿರುತ್ತದೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್ ನಲ್ಲಿ ಐದು, Daman And Diuನಲ್ಲಿ ಒಂದು, ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.






