Home Crime ಮಲ್ಪೆ: ಬೋಟಿನಲ್ಲಿ ಬಲೆ ಎಳೆಯುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು…!!

ಮಲ್ಪೆ: ಬೋಟಿನಲ್ಲಿ ಬಲೆ ಎಳೆಯುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಓಡಿಸ್ಸಾ ಮೂಲದ ಮೀನುಗಾರನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಪಿರ್ಯಾದಿದಾರರಾದ ಶಿಬಾ ಬೇಹರ್ ಇವರು ಓಡಿಸ್ಸಾ ರಾಜ್ಯದವರು. ಇವರ ಅಣ್ಣ ಗಜ್ ಬೇಹರ್ (36)ಇವರು ಮಲ್ಪೆಯ ಲತಾ ಕುಂದರ್ ಅವರ ಮಾಲಿಕತ್ವದ ಶ್ರೀ ಮಾತಾ IND-KA-02-MM-6214 ನಂಬರ್ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.

ದಿನಾಂಕ 22/08/2026 ರಂದು ರಾತ್ರಿ 10:30ಕ್ಕೆ ಮಲ್ಪೆ ಬಂದರಿನಿಂದ ಬೋಟು ಸಮುದ್ರಕ್ಕೆ ತೆರಳಿತ್ತು. ಬೆಳಿಗ್ಗೆ 07:30ಕ್ಕೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಪ್ರಾರಂಭಿಸಿದ್ದರು.

ಅದೇ ದಿನ ಬೆಳಿಗ್ಗೆ 08:30ಕ್ಕೆ ಮೀನುಗಾರಿಕೆಗಾಗಿ ಬಲೆ ಬಿಟ್ಟು ಅದನ್ನು ಮೇಲಕ್ಕೆ ಎಳೆಯುವಾಗ ಗಜ್ ಬೇಹರ್ ಅವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದಿದ್ದಾರೆ.

ತಕ್ಷಣ ಸಹ ಮೀನುಗಾರರು ಅವರು ಬಿದ್ದ ಜಾಗದಲ್ಲಿ ಬಲೆ ಹಾಕಿ ಹುಡುಕಾಟ ನಡೆಸಿದರು. ಸುಮಾರು 08:50ಕ್ಕೆ ಗಜ್ ಬೇಹರ್ ಬಲೆಗೆ ಸಿಕ್ಕಿದ್ದಾರೆ. ಕೂಡಲೇ ಅವರನ್ನು ಬೋಟಿನ ಮೇಲೆ ಎತ್ತಿ ಉಪಚರಿಸಿದಾಗ ಅವರು ಮೃತಪಟ್ಟಿರುವುದು ಕಂಡು ಬಂದಿದೆ.

ಸುಮಾರು 08:30 ರಿಂದ 08:50ರ ಮಧ್ಯಾವಧಿಯಲ್ಲಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 51/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.