Home Latest ಉಡುಪಿ: ಕಿನ್ನಿಮುಲ್ಕಿಯಲ್ಲಿ ಸರ್ಕಾರಿ ಬಸ್‌ನ ಸ್ಟಬ್ ಆಕ್ಸಲ್ ಮುರಿದು ಕಳಚಿ ಬಿದ್ದ ಚಕ್ರ…!!

ಉಡುಪಿ: ಕಿನ್ನಿಮುಲ್ಕಿಯಲ್ಲಿ ಸರ್ಕಾರಿ ಬಸ್‌ನ ಸ್ಟಬ್ ಆಕ್ಸಲ್ ಮುರಿದು ಕಳಚಿ ಬಿದ್ದ ಚಕ್ರ…!!

ಸಾಂದರ್ಭಿಕ ಚಿತ್ರ

ಉಡುಪಿ : ಕಿನ್ನಿಮುಲ್ಕಿ ಬಳಿ ಸ್ಟಬ್ ಆಕ್ಸಲ್ ಮುರಿದು ಸರ್ಕಾರಿ ಬಸ್‌ನ ಹಿಂದಿನ ಚಕ್ರ ಕಳಚಿ ಬಿದ್ದ ಪರಿಣಾಮ ಬಸ್‌ನಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲಿ ಪಾರಾದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಬೆಳಗ್ಗೆ 9:15ರ ಸುಮಾರಿಗೆ ಕಿನ್ನಿಮುಲ್ಕಿ ಜಂಕ್ಷನ್ ದಾಟಿ ವೇಗ ಪಡೆದುಕೊಳ್ಳುತ್ತಿದ್ದಾಗ ಸ್ಟಬ್ ಆಕ್ಸಲ್ ಮುರಿದು ಎಡಭಾಗದ ಹಿಂದಿನ ಚಕ್ರ ಏಕಾಏಕಿ ಕಳಚಿಕೊಂಡಿದೆ.

ಚಾಲಕ ತಕ್ಷಣ ಬ್ರೇಕ್ ಹಾಕಿ ಬಸ್‌ನ್ನು ರಸ್ತೆ ಬದಿಗೆ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಬಸ್‌ನಲ್ಲಿದ್ದ 35 ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ, ಆದರೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕಳಚಿದ ಚಕ್ರ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ಉಡುಪಿ-ಕುಂದಾಪುರ ಹೆದ್ದಾರಿ 66ರಲ್ಲಿ ಸುಮಾರು 30 ನಿಮಿಷಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್‌ಗಳು ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯ ನಡೆಸಿದರು. ಸಿಲುಕಿದ್ದ ಪ್ರಯಾಣಿಕರಿಗಾಗಿ ಬದಲಿ ಬಸ್ ವ್ಯವಸ್ಥೆ ಮಾಡಲಾಯಿತು.

ಯಾಂತ್ರಿಕ ದೋಷದಿಂದ ಸ್ಟಬ್ ಆಕ್ಸಲ್ ಮುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಪೋ ಮ್ಯಾನೇಜರ್ ಬಸ್‌ನ ತಾಂತ್ರಿಕ ತಪಾಸಣೆಗೆ ಆದೇಶಿಸಿದ್ದಾರೆ.