Home Crime ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಯ ಬಂಧನ…!!

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಯ ಬಂಧನ…!!

ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಸಮೀಪ ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರವೆಸಗಿದ ಆರೋಪದಡಿ ಸ್ಕೂಲ್ ಟ್ರಿಪ್ ಆಟೊರಿಕ್ಷಾ ಚಾಲಕನನ್ನು ವೇಣೂರು ಠಾಣೆ ಪೊಲೀಸರು ಬಂಧಿಸಿ ಮಂಗಳೂರು ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.

ವೇಣೂರು ಜಮಾಲುದ್ದೀನ್ ಅಲಿಯಾಸ್ ಜಲಾಲ್ (35) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ

ಪೊಲೀಸ್ ಪ್ರಕಟಣೆಯ ಪ್ರಕಾರ, 14 ವರ್ಷದ ಸಂತ್ರಸ್ತ ಬಾಲಕಿಯು ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಮಕ್ಕಳಿಗೆ ಟ್ರಿಪ್ ಮಾಡುತ್ತಿದ್ದ ಆರೋಪಿ ಜಮಾಲುದ್ದೀನ್‌ನ ಆಟೊರಿಕ್ಷಾದಲ್ಲೇ ಶಾಲೆಗೆ ಹೋಗಿ ಬರುತ್ತಿದ್ದಳು. ಈ ವೇಳೆ ಆರೋಪಿಯು ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಬಾಲಕಿ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಯು ಜೀವಬೆದರಿಕೆ ಒಡ್ಡಿದ್ದರಿಂದ, ಭಯಗೊಂಡ ಬಾಲಕಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ. ಆಗಸ್ಟ್ 13ರಂದು ಸಂಜೆ ವೇಳೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಆರೋಪಿ, ಆಕೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾನೆ.

ಘಟನೆಯ ಬಳಿಕ ಬಾಲಕಿಯು ಕುಟುಂಬಸ್ಥರೊಂದಿಗೆ ತೆರಳಿ ಆಗಸ್ಟ್ 15ರಂದು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಅ.ಕ್ರ: 56/2026ರಂತೆ ಬಿಎನ್‌ಎಸ್ (BNS) ಕಲಂ 75(2), 64(1), 65(1), 351(3) ಹಾಗೂ ಪೋಕ್ಸೊ (POCSO) ಕಾಯ್ದೆಯ ಕಲಂ 4(2), 8, 12ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಲ್ಕು ಮಕ್ಕಳ ತಂದೆಯಾಗಿರುವ ಆರೋಪಿಯನ್ನು ಆಗಸ್ಟ್ 15ರಂದೇ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.