ಕಾಪು: ಮನೆ ಹಾಗೂ ಜಮೀನಿಗೆ ತೆರಳುತ್ತಿದ್ದ ವೃದ್ಧ ಮಹಿಳೆ ಮತ್ತು ಅವರ ಪುತ್ರನನ್ನು ತಡೆದು ಜಗಳವಾಡಿ, ಜೀವ ಬೆದರಿಕೆ ಹಾಕಿ, ಮನೆಗೆ ಕಲ್ಲು ಹಾಗೂ ಬಿಯರ್ ಬಾಟಲಿ ಎಸೆದ ಆರೋಪದಡಿ ನಾಲ್ವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡು ಗ್ರಾಮದ ಶಕುಂತಳಾ ಎಸ್. ಪುತ್ರನ್ (67) ಅವರು ಮಹಾರಾಷ್ಟ್ರದ ಥಾಣೆಯಲ್ಲಿ ವಾಸವಾಗಿದ್ದು, ಕಾಪುವಿನಲ್ಲಿರುವ ತಮ್ಮ ಮನೆ ಹಾಗೂ ಜಮೀನನ್ನು ಸ್ವಚ್ಛಗೊಳಿಸಲು ವರ್ಷಕ್ಕೆ 5ರಿಂದ 6 ಬಾರಿ ಊರಿಗೆ ಬರುತ್ತಿದ್ದರು.
2025ರ ಏಪ್ರಿಲ್ 13ರಂದು ಶಕುಂತಳಾ ಹಾಗೂ ಅವರ ಪುತ್ರ ನೀರಜ್ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿತರಾದ ರಾಘು ಕೋಟ್ಯಾನ್, ವಸಂತಿ ಕೋಟ್ಯಾನ್, ಧನ್ಯ ಕೋಟ್ಯಾನ್ ಹಾಗೂ ದಮಯಂತಿ ಅವರು ದಾರಿ ತಡೆದು, ಜಾಗದ ಮೂಲಕ ಮನೆಗೆ ತೆರಳದಂತೆ ಹೇಳಿ ಜಗಳವಾಡಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಏಪ್ರಿಲ್ 18ರಂದು ಶಕುಂತಳಾ ಹಾಗೂ ನೀರಜ್ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ರಿಕ್ಷಾವನ್ನು ತಡೆದು ಶಕುಂತಳಾರನ್ನು ಬಲವಂತವಾಗಿ ಕೆಳಗಿಳಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ನೀರಜ್ ತಡೆಯಲು ಬಂದಾಗ ರಾಘು ಕೋಟ್ಯಾನ್ ಅವರು ಆತನ ಶರ್ಟ್ ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಶಕುಂತಳಾ ಭಯದಿಂದ ಮನೆಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡ ಬಳಿಕ ಆರೋಪಿಗಳು ಮನೆಯ ಮೇಲೆ ಕಲ್ಲು ಹಾಗೂ ಬಿಯರ್ ಬಾಟಲಿ ಎಸೆದಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



