ಬೆಳ್ತಂಗಡಿ : ಕಳಿಯ ಗ್ರಾಮದ ನಾಳ ದೇವಸ್ಥಾನಕ್ಕೆ ಪೂಜೆಗೆ ಹೊರಟಿದ್ದ ಬಾಲಕನ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಕುವೆಟ್ಟು ಪಂಚಾಯತ್ ಓಡಿಲ್ನಾಳ ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ಎಂಬಲ್ಲಿ ನಡೆದಿದೆ.
ಮೃತ ಬಾಲಕನ್ನು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಎಂದು ಗುರುತಿಸಲಾಗಿದೆ.
ಸುಮಂತ ಕಳಿಯ ಗ್ರಾಮದ ನಾಳ ದೇವಸ್ಥಾನಕ್ಕೆ ಮುಂಜಾನೆ ಧನುಪೂಜೆಗೆ ಹೊರಟಿದ್ದ, ಪ್ರತಿದಿನ ಸ್ನೇಹಿತರ ಜತೆ ಧನು ಪೂಜೆಗೆ ತೆರಳುತ್ತಿದ್ದ, ಇಂದು ಬಾರದೆ ಇರುವ ಕುರಿತು ಸ್ನೇಹಿತರು ಸುಮಂತ್ ಮನೆಯವರಿಗೆ ಕರೆ ಮಾಡಿದಾಗ, ಆತ ಮುಂಜಾನೆಯೇ ದೇವಸ್ಥಾನಕ್ಕೆ ಹೋಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ. ಆದರೆ ಸುಮಂತ್ ದೇವಸ್ಥಾನಕ್ಕೆ ಬಂದಿಲ್ಲ ಎಂಬ ಮಾಹಿತಿ ತಿಳಿದ ಬಳಿಕ ಕುಟುಂಬಸ್ಥರು ಆತಂಕಗೊಂಡು ಸ್ಥಳೀಯರಿಗೆ ವಿಷಯ ತಿಳಿಸಿದರು.
ಸ್ಥಳೀಯರು ಹುಡುಕಾಟಕ್ಕಿಳಿದಾಗ ಬಾಲಕ ತೆರಳಿದ ಪ್ರದೇಶದ ತೋಟದ ಕೆರೆಯ ಬದಿಯಲ್ಲಿ ರಕ್ತದ ಕಲೆಗಳು ಕಾಣಿಸಿವೆ. ಕೊನೆಗೆ ಸುಮಾರು 11.30 ರ ವೇಳೆಗೆ ಸುಮಂತ್‌ನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಬಾಲಕನ ತಲೆಯ ಭಾಗದಲ್ಲಿ ಗಂಭೀರ ಗಾಯಗಳಿರುವುದು ಕಂಡುಬಂದಿದ್ದು, ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.
ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳದವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು ಕೆರೆಯಲ್ಲಿ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




