Home Crime ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ : ಕೋಕಾ ಕಾಯ್ದೆ ಅಡಿ ಆರೋಪ ಹೊತ್ತಿದ್ದ ಐವರಿಗೆ ಹೈಕೋರ್ಟ್‌ನಿಂದ...

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ : ಕೋಕಾ ಕಾಯ್ದೆ ಅಡಿ ಆರೋಪ ಹೊತ್ತಿದ್ದ ಐವರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು…!!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಇರಾಕೋಡಿ ಯಲ್ಲಿ ನಡೆದಿದ್ದ ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ‘ಕೋಕಾ – (KCOCA) ಅಡಿ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಸುಮಳ್ಳಿಯ ಪವನ್ ಮಾರುತಿ ಗಾಯಕವಾಡ್ (33), ಅನಂತ ನಾಗೋಜಿ ಸಾವಂತ್ (36), ಬೆಳಗಾವಿ ಹುಂಚನಟ್ಟಿಯ ಬಿಟ್ಟಪ್ಪ ನಾಗಪ್ಪ ತರಿಹಾಳ (45) ಹಾಗೂ ಶಿವಮೊಗ್ಗ ಜಿಲ್ಲೆ ಸಾಗರದ ನವೀನ್ ಕುಮಾರ್ ಎಂ. (29), ಸಾಗರದ ನಿವಾಸಿ, ಪ್ರಕರಣದ 20ನೇ ಆರೋಪಿ ಪ್ರತಿಮಾ ಎ.ಎನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ.

2025ರ ಮೇ 27ರಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಸುಹಾಸ್ ಶೆಟ್ಟಿ ಕೊಲೆಯ ಸೇಡಿನ ಹಿನ್ನೆಲೆಯಲ್ಲಿ ಅಬ್ದುಲ್ ರೆಹಮಾನ್ ಕೊಲೆ ಹಾಗೂ ಕಲಂದರ್ ಶಾಫಿ ಮೇಲೆ ಹಲ್ಲೆ ನಡೆದಿತ್ತು. ಈ ಕುರಿತು ಮೊಹಮ್ಮದ್ ನಿಸ್ಸಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ (ಕ್ರೈಂ ನಂ. 54/2025) ದಾಖಲಿಸಿಕೊಂಡಿದ್ದರು.

ತನಿಖೆ ಪೂರ್ಣಗೊಳಿಸಿದ ಪೊಲೀಸರು ಮೊದಲು 14 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ನಂತರ ‘ಕೋಕಾ’ ಕಾಯ್ದೆಯ ಕಲಂಗಳನ್ನು ಸೇರಿಸಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಸಲ್ಲಿಸಲಾದ ಎರಡನೇ ಹೆಚ್ಚುವರಿ ಆರೋಪಪಟ್ಟಿಯಲ್ಲಿ 9 ಮಂದಿಯನ್ನು ಹೆಚ್ಚುವರಿ ಸೇರಿಸಲಾಗಿದೆ.
ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ ಶ್ಯಾಮ್ ಅವರು, “ಪ್ರಕರಣದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದು, ಊಟ ಹಾಗೂ ಪ್ರಯಾಣಕ್ಕೆ ಹಣ ನೀಡಿದ್ದಾರೆ ಎಂಬ ಆರೋಪವನ್ನು ಹೊರತುಪಡಿಸಿದರೆ ಅರ್ಜಿದಾರರ ವಿರುದ್ಧ ಯಾವುದೇ ಗಂಭೀರ ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪವಿಲ್ಲ. ಇವರಿಗೆ ಯಾವುದೇ ಹಳೆಯ ಅಪರಾಧ ಹಿನ್ನೆಲೆಯೂ ಇಲ್ಲ. ಈಗಾಗಲೇ ತನಿಖೆ ಪೂರ್ಣಗೊಂಡಿರುವುದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ (Addl. SPP) ರಶ್ಮಿ ಜಾದವ್ ಅವರು ಆಕ್ಷೇಪ ವ್ಯಕ್ತಪಡಿಸಿದರಾದರೂ, ಅರ್ಜಿದಾರರ ಅಪರಾಧ ಹಿನ್ನೆಲೆ ಇಲ್ಲದಿರುವ ಅಂಶವನ್ನು ಅಲ್ಲಗಳೆಯಲಿಲ್ಲ.

ನ್ಯಾಯಪೀಠದ ಪ್ರಮುಖ ಅಭಿಪ್ರಾಯ:
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, “ಆರೋಪಿಗಳ ವಿರುದ್ಧ ಕೇವಲ ‘ಕೋಕಾ’ ಕಾಯ್ದೆಯ ಕಲಂಗಳನ್ನು ಅನ್ವಯಿಸಲಾಗಿದೆ ಎಂಬ ಮಾತ್ರಕ್ಕೆ ಸೆಕ್ಷನ್ 22(3) ಅಡಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಬಾರದು ಎಂದೇನಿಲ್ಲ. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ‘ಕೋಕಾ’ ಕಾಯ್ದೆಯ ನಿಬಂಧನೆಗಳು ನೇರವಾಗಿ ಅನ್ವಯವಾಗುವುದಿಲ್ಲ ಎಂದಾದಾಗ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಯಾವುದೇ ಕಾನೂನು ಅಡ್ಡಿಯಿಲ್ಲ” ಎಂದು ಸ್ಪಷ್ಟಪಡಿಸಿದರು.