Home Crime ಮಲ್ಪೆ: ಕೊಲೆ ಪ್ರಕರಣ : ಆರೋಪಿ ಹುಬ್ಬಳ್ಳಿಯಲ್ಲಿ ಬಂಧನ…!!

ಮಲ್ಪೆ: ಕೊಲೆ ಪ್ರಕರಣ : ಆರೋಪಿ ಹುಬ್ಬಳ್ಳಿಯಲ್ಲಿ ಬಂಧನ…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆಯ ಬಾಬುತೋಟ ಧಕ್ಕೆ ಬಳಿಯ ಖಾಲಿ ಜಾಗದಲ್ಲಿ ಮಲಗುತ್ತಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಆರೋಪಿಯನ್ನು ಹುಬ್ಬಳ್ಳಿ ಹೊರವಲಯದಲ್ಲಿ ಬಂಧಿಸಿದ್ದಾರೆ.

ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಪರಮೇಶಿ @ ಪರಮ್ ವೇಲಿ (55) ಎಂದು ಗುರುತಿಸಲಾಗಿದೆ.

ಈತ ಕಳೆದ ಸುಮಾರು 3 ವರ್ಷಗಳಿಂದ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಹೆಕ್ಕಿಕೊಂಡು ಜೀವನ ನಡೆಸುತ್ತಿದ್ದ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಮಲ್ಪೆಯ ಬಾಬುತೋಟ ಧಕ್ಕೆ ಬಳಿಯ ಮಲ್ಪೆ ಮರೈನ್ ಏಜೆನ್ಸೀಸ್ ಪಕ್ಕದಲ್ಲಿರುವ ಸುಮಾರು 10 ಅಡಿ ಅಗಲದ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಹಾಕಿಕೊಂಡು ಮಲಗುತ್ತಿದ್ದರು.

ದೂರುದಾರ ರಿಷಬ್, ವಡಬಾಂಡೇಶ್ವರ, ಮಲ್ಪೆ ಇವರು ಸದರಿ ಸ್ಥಳದಲ್ಲಿ ಮಲ್ಪೆ ಮರೈನ್ ಏಜೆನ್ಸೀಸ್ ವ್ಯವಹಾರ ನಡೆಸುತ್ತಿದ್ದು, ಏಜೆನ್ಸಿ ಪಕ್ಕದಲ್ಲಿ ಮೀನು ಬಾಕ್ಸ್ ಇಡುವ ಗೋಡನ್ ಇದೆ.

ದಿನಾಂಕ 28.09.2026 ರಂದು ಸಂಜೆ 7:00 ಗಂಟೆಗೆ ದೂರುದಾರರು ಏಜೆನ್ಸಿಗೆ ಶೆಟರ್ ಹಾಕಿ ಹೋಗುವಾಗ ಪರಮೇಶಿ ಅವರು ಪಕ್ಕದ ಖಾಲಿ ಜಾಗದಲ್ಲಿ ಕುಳಿತಿದ್ದರು. ಮರುದಿನ ದಿನಾಂಕ 29.09.2026 ರಂದು ಬೆಳಿಗ್ಗೆ 08:30 ಗಂಟೆಗೆ ಏಜೆನ್ಸಿಗೆ ಬಂದು ಪಕ್ಕದ ಜಾಗದಲ್ಲಿ ಬೈಕ್ ಇಡಲು ಹೋದಾಗ ಪರಮೇಶಿ ಅವರು ಗೋಣಿ ಚೀಲದ ಮೇಲೆ ರಕ್ತದ ಮಡುವಿನಲ್ಲಿ ಅಡ್ಡವಾಗಿ ಬಿದ್ದಿರುವುದು ಕಂಡುಬಂದಿದೆ. ಕುತ್ತಿಗೆಯ ಬಳಿಯಿಂದ ರಕ್ತ ಹರಿದು ನೆಲದ ಮೇಲೆ ಬಿದ್ದಿತ್ತು.

ಯಾರೋ ದುಷ್ಕರ್ಮಿಗಳು ದಿನಾಂಕ 28.09.2026 ಸಂಜೆ 7 ಗಂಟೆಯಿಂದ 29.09.2026 ಬೆಳಿಗ್ಗೆ 08:30 ಗಂಟೆಯ ಮಧ್ಯದಲ್ಲಿ ಯಾವುದೋ ದ್ವೇಷದಿಂದ ಯಾವುದೋ ಆಯುಧದಿಂದ ಕುತ್ತಿಗೆಗೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2026, ಕಲಂ 103 BNS ರಂತೆ ಪ್ರಕರಣ ದಾಖಲಾಗಿದೆ.

ಉಡುಪಿ ಉಪವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು, ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಡಿ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ವಿಶ್ವನಾಥ, ಹೆಚ್.ಸಿ ಆದರ್ಶ, ಸಿಪಿಸಿ ಕುಬೇರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಆರೋಪಿ ಆರೋಗ್ಯ ದಾಸ್ @ ಕಾಮಿ (55), ಹುಬ್ಬಳ್ಳಿ ಎಂಬಾತನನ್ನು ಹುಬ್ಬಳ್ಳಿ ಹೊರವಲಯದಲ್ಲಿ ದಸ್ತಗಿರಿ ಮಾಡಿದ್ದಾರೆ.

ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ಮುಂದುವರಿಸಲಾಗಿದೆ.