ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ವಾಹನಗಳ ಸುಗಮ ಸಂಚಾರ ಹಾಗೂ ರಸ್ತೆ ಅಪಘಾತ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಾಕಿ ಇರುವ ಸರ್ವೀಸ್ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಉಡುಪಿಯಲ್ಲಿರುವ ಸಂಸದರ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿಯಂತರರೊಂದಿಗೆ ಮಂಗಳವಾರ (ಆ.18) ಆಯೋಜಿಸಿದ್ದ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಸಂಬಂಧಿತ ಸರ್ವೀಸ್ ರಸ್ತೆ, ಮೇಲ್ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪ್ರಮುಖವಾಗಿ ಕೋಟೇಶ್ವರ ಜಂಕ್ಷನ್ನಿಂದ ಬೀಜಾಡಿ ಕ್ರಾಸ್ವರೆಗಿನ ಸುಮಾರು 830 ಮೀಟರ್, ಅನ್ನಪೂರ್ಣಾ ಹೋಟೆಲ್ನಿಂದ ಬೀಜಾಡಿ, ಕುಂಭಾಶಿ, ತೆಕ್ಕಟ್ಟೆ ಭಾಗದಲ್ಲಿ ಎರಡು ಬದಿಯಲ್ಲಿ ಸುಮಾರು 3,500 ಮೀಟರ್, ತೆಕ್ಕಟ್ಟೆಯಲ್ಲಿ 1,020 ಮೀಟರ್, ಬ್ರಹ್ಮಾವರದಲ್ಲಿ 400 ಮೀಟರ್, ಸಂತೆಕಟ್ಟೆಯಲ್ಲಿ ಸಾವಿರ ಮೀಟರ್, ಉದ್ಯಾವರ ಜಂಕ್ಷನ್ನಲ್ಲಿ 325 ಮೀಟರ್ ಕಾಮಗಾರಿ ಬಾಕಿ ಇದೆ. ಅವುಗಳನ್ನೆಲ್ಲ ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದರು.
ರಾ.ಹೆ.ಯ ಕೆಲವು ಕಡೆಗಳಲ್ಲಿ ಇನ್ನೂ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿಲ್ಲ. ಚರಂಡಿಗಳಂತೂ ಮೊದಲೇ ಸರಿಯಿಲ್ಲ. ಸರ್ವೀಸ್ ರಸ್ತೆ ನಿರ್ಮಿಸುವಾಗ ಕಾಮಗಾರಿಗಳ ಗುಣಮಟ್ಟ ಹಾಗೂ ಸಂಚಾರ ಸುರಕ್ಷತಾ ಕ್ರಮ ಕಾಯ್ದುಕೊಳ್ಳಬೇಕು. ಉಡುಪಿಯ ನಿಟ್ಟೂರು ಮತ್ತು ಬ್ರಹ್ಮಾವರದ ಮಹೇಶ್ ಹಾಸ್ಪಿಟಲ್ ಬಳಿ ಸ್ಥಳ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗುವುದು ಎಂದರು.
ಸಂತೆಕಟ್ಟೆ ಪೆಟ್ರೋಲ್ ಪಂಪ್ನಿಂದ ಅಂಬಾಗಿಲು ಜಂಕ್ಷನ್ ವರೆಗೆ 1 ಕಿಮೀ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿಗೆ ಮರಗಳ ತೆರವು ಕಾರ್ಯ ಆರಂಭವಾಗಿದೆ. ಕಿನ್ನಿಮೂಲ್ಕಿ ಯಿಂದ ಅಂಬಲಪಾಡಿ ಸಂಪರ್ಕಿಸುವ ರಸ್ತೆಯೂ ಹಾಳಾಗಿರುವ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ. ತುರ್ತಾಗಿ ಹಾಗೂ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಎನ್ಎಚ್ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ, ಎನ್ಎಚ್ಎಐ ಕನ್ಸಲ್ಟಂಟ್ ಪ್ರೆಸಿಡೆಂಟ್ ಇಂಜಿನಿಯರ್ ಅಲೋಕ್ ಎಂ., ಎನ್ಎಚ್ಎಐ ಕನ್ಸಲ್ಟಂಟ್ ಟೀಮ್ ಲೀಡರ್ ಎನ್.ಆರ್. ಗೋಸ್ವಾಮಿ, ಧ್ರುವ್ ಕನ್ಸಲ್ಟೆನ್ಸಿಯ ಎಎಚ್ಇ ವಿಘ್ನೇಶ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇರಳ ಮಾದರಿಯಲ್ಲಿ ಕುಂದಾಪುರದಿಂದ ತಲಪಾಡಿಯವರೆಗೆ ಅಪಘಾತ ರಹಿತ ರಸ್ತೆ ನಿರ್ಮಿಸುವ ಚಿಂತನೆಯಿದೆ. ಕಟಪಾಡಿ ಅಂಡರ್ಪಾಸ್ನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಒಂದು ಬದಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೊಂದು ಬದಿಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಅಲ್ಲಾಗುತ್ತಿರುವ ವಾಹನ ದಟ್ಟಣೆ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ಸುಪ್ರೀಂ ಕೋರ್ಟ್ನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಬದಿಯಲ್ಲಿ 75 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಬಾರದೆಂಬ ಸೂಚನೆ ಇದೆ. ಹೀಗಾಗಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಕೋಟ ಪೂಜಾರಿ ಭರವಸೆ ನೀಡಿದರು.




