ದಕ್ಷಿಣ ಕನ್ನಡ ಜಿಲ್ಲೆಯ ಶರ್ಮಿಳಾ ಅವರು ಸುಬ್ರಹ್ಮಣ್ಯ ಲೇಔಟ್‍ನ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟಿದ್ದರು. ಮೃತಳ ಸ್ನೇಹಿತ ಕೆ.ರೋಹಿತ್ ಅವರ ದೂರು ಆಧರಿಸಿ, ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಅರಸು ನಗರ ನಿವಾಸಿ ಕರ್ನಲ್ ಕುರೈ (18) ಬಂಧಿತ ಆರೋಪಿ.
ಶರ್ಮಿಳಾ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದ ಕರ್ನಲ್ ಕುರೈ, ಜನವರಿ 3ರ ರಾತ್ರಿ 9 ಗಂಟೆ ಸಮಯದಲ್ಲಿ ಸ್ಲೈಡಿಂಗ್ ವಿಂಡೋ ಮೂಲಕ ಫ್ಲ್ಯಾಟ್ ಪ್ರವೇಶಿಸಿದ್ದಾನೆ. ಲೈಂಗಿಕವಾಗಿ ಸಹಕರಿಸುವಂತೆ ಕೇಳಿದಾಗ, ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಆಕೆಯ ಬಾಯಿ ಮತ್ತು ಮೂಗನ್ನು ಬಲವಾಗಿ ಹಿಡಿದಿದ್ದ ಕಾರಣ ಅರೆಪ್ರಜ್ಞಾಸ್ಥಿತಿಗೆ ತಲುಪಿದರು. ಈ ವೇಳೆ ಆಕೆಗೆ ಸಣ್ಣ ಗಾಯವಾಗಿ ರಕ್ತ ಬಂದಿದೆ. ಆರೋಪಿಯು ಆಕೆ ಧರಿಸಿದ್ದ ಬಟ್ಟೆ ಹಾಗೂ ಇತರೆ ಸಾಕ್ಷ್ಯಗಳನ್ನು ಕೊಠಡಿಯ ಹಾಸಿಗೆ ಮೇಲೆ ಹಾಕಿ, ಬೆಂಕಿ ಹಚ್ಚಿ ಸಾಕ್ಷ್ಯನಾಶ ಮಾಡಿದ್ದ’ ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಶರ್ಮಿಳಾಗೆ ಸೇರಿದ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದ. ಹೊಗೆ ಆವರಿಸಿಕೊಂಡು, ಉಸಿರುಗಟ್ಟಿ ಮೃತಪಟ್ಟಿದ್ದರು. ವಸತಿ ಸಮುಚ್ಚಯದ ಫ್ಲ್ಯಾಟ್‌ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು (ಎಫ್‌ಎಸ್ಎಲ್) ಭೇಟಿ ನೀಡಿ ಪರಿಶೀಲಿಸಿದ್ದರು.
ತಾಂತ್ರಿಕ ಸಾಕ್ಷ್ಯಾಧಾರಗಳ ಮೇರೆಗೆ ಆರೋಪಿಯನ್ನು ಪತ್ತೆ ಮಾಡಿ, ವಿಚಾರಣೆ ನಡೆಸಿದಾಗ, ಕೃತ್ಯವೆಸಗಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದರು.
ಆರೋಪಿಯನ್ನು ಮೂರು ದಿನ ಕಸ್ಟಡಿಗೆ ಪಡೆಯಲಾಗಿದೆ. ಈತ ಪಿಯುಸಿ ವಿದ್ಯಾರ್ಥಿಯಾಗಿದ್ದು, ತಾಯಿ ಜತೆ ವಾಸವಾಗಿದ್ದ. ತನಿಖೆ ಮುಂದುವರಿದಿದೆ.



