ಉಡುಪಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ನಾಗಸ್ವರ ವಾದಕ ಹಾಗೂ ಸ್ಯಾಕ್ಸೋಫೋನ್ ಕಲಾವಿದ ಹೆರ್ಗ ಸುಂದರ ಶೇರಿಗಾರ್ (ಎಳ್ಳಾರೆ) ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಪರ್ಕಳ, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ವಿವಿಧ ಶುಭ ಸಮಾರಂಭಗಳು, ದೇವಸ್ಥಾನ ಹಾಗೂ ದೈವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಗಸ್ವರ ವಾದನದ ಮೂಲಕ ಅವರು ವಿಶೇಷ ಛಾಪು ಮೂಡಿಸಿದ್ದರು. ಸ್ಯಾಕ್ಸೋಫೋನ್ ವಾದನದಲ್ಲಿಯೂ ಅವರು ವಿಶೇಷ ಪ್ರಾವೀಣ್ಯತೆ ಹೊಂದಿದ್ದರು.
ಸಂಗೀತ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸುಂದರ ಶೇರಿಗಾರ್ ಅವರು ಅಪಾರ ಸಂಖ್ಯೆಯ ಶಿಷ್ಯರನ್ನು ಹೊಂದಿದ್ದರು. ಅನೇಕ ಯುವ ಕಲಾವಿದರಿಗೆ ನಾಗಸ್ವರ ವಾದನದ ತರಬೇತಿ ನೀಡಿ, ಈ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಅವರ ಕಲಾ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸರಳ ಸಜ್ಜನಿಕೆ ಹಾಗೂ ಕಲಾ ಬದ್ಧತೆಯಿಂದ ಜನಮನ್ನಣೆ ಗಳಿಸಿದ್ದ ಅವರ ನಿಧನದಿಂದ ಕರಾವಳಿಯ ನಾಗಸ್ವರ ಹಾಗೂ ವಾದ್ಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಅವರ ಅಗಲಿಕೆಗೆ ಕಲಾವಿದರು, ಶಿಷ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಮೃತರು ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.





