Home Latest ಪಡುಬಿದ್ರಿ: ಸತತ 3 ಗಂಟೆಗಳ ಕಾಲ ಸಮುದ್ರದಲ್ಲಿ ಈಜಾಡಿದ ಮಾನಸಿಕ ಅಸ್ವಸ್ಥ ವ್ಯಕ್ತಿ : ಈಶ್ವರ್...

ಪಡುಬಿದ್ರಿ: ಸತತ 3 ಗಂಟೆಗಳ ಕಾಲ ಸಮುದ್ರದಲ್ಲಿ ಈಜಾಡಿದ ಮಾನಸಿಕ ಅಸ್ವಸ್ಥ ವ್ಯಕ್ತಿ : ಈಶ್ವರ್ ಮಲ್ಪೆ ಅವರಿಂದ ರಕ್ಷಣೆ…!!

ಪಡುಬಿದ್ರಿ: ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ವ್ಯಕ್ತಿಯೊಬ್ಬರು ನಡು ಮಧ್ಯಾಹ್ನ ಅರಬ್ಬಿ ಸಮುದ್ರಕ್ಕಿಳಿದು ಸತತ 3 ಗಂಟೆಗಳ ಕಾಲ ಈಜಾಡುತ್ತಿದ್ದಾಗ, ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ಸಮುದ್ರಕ್ಕಿಳಿದು ಮನವೊಲಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿರುವ ಘಟನೆ ಭಾನುವಾರ ನಡೆದಿದೆ.

ಕಾಡಿಪಟ್ನ ನಿವಾಸಿ ಯತೀಶ್ (38) ರಕ್ಷಿಸಲ್ಪಟ್ಟ ವ್ಯಕ್ತಿ ಎಂದು ತಿಳಿಯಲಾಗಿದೆ.

ಯತೀಶ್ ಈ ಹಿಂದೆ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಲೈಫ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆಯೂ ಒಂದೆರಡು ಬಾರಿ ಅವರು ಇಂತಹ ಸಾಹಸಕ್ಕೆ ಮುಂದಾಗಿದ್ದಾಗ ಸ್ಥಳೀಯರೇ ರಕ್ಷಿಸಿ ದಡಕ್ಕೆ ಕರೆತಂದಿದ್ದರು. ಭಾನುವಾರ ಮಧ್ಯಾಹ್ನ ಜನ ನೋಡನೋಡುತ್ತಿದ್ದಂತೆಯೇ ಅವರು ಸಮುದ್ರಕ್ಕೆ ಇಳಿದಿದ್ದರು.

ಕಾಪುವಿನ ಭೈರವಿ ದೋಣಿಯಲ್ಲಿ ಆಗಮಿಸಿದ ಮೀನುಗಾರರು ಯತೀಶ್ ಅವರ ಕೈ ಹಿಡಿದು ದೋಣಿಗೆ ಎಳೆದುಕೊಳ್ಳಲು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆಸಿದ ಪ್ರಯತ್ನಗಳೂ ವಿಫಲವಾಗಿದ್ದವು.

ವಿಷಯ ತಿಳಿಯುತ್ತಿದ್ದಂತೆ ಪಡುಬಿದ್ರಿಯ ಸದಾಶಿವ ಅವರು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕರು, ಈಶ್ವ‌ರ್ ಮಲ್ಪೆ ಅವರನ್ನು ಸಂಪರ್ಕಿಸಿ ಸಮುದ್ರ ತೀರಕ್ಕೆ ತೆರಳಿ ವ್ಯಕ್ತಿಯನ್ನು ರಕ್ಷಿಸುವಂತೆ ಕೋರಿಕೊಂಡರು.

ಮಧ್ಯಾಹ್ನ 2:15ರ ವೇಳೆಗೆ ಪಡುಬಿದ್ರಿ ಕಡಲತೀರಕ್ಕೆ ಆಗಮಿಸಿದ ಈಶ್ವ‌ರ್ ಮಲ್ಪೆ, ಸಮುದ್ರಕ್ಕಿಳಿದು ಸುಮಾರು ಮೂರು ಮಾರು ದೂರ ಈಜಿ ತೆರಳಿ ಮಾನವೀಯತೆಯ ಮಾತುಗಳ ಮೂಲಕ ಯತೀಶ್ ಅವರ ಮನವೊಲಿಸಿದರು.

ಬಳಿಕ ಅವರೊಂದಿಗೆ ಈಜುತ್ತಲೇ ಮಧ್ಯಾಹ್ನ 3:15ರ ಸುಮಾರಿಗೆ ಸುರಕ್ಷಿತವಾಗಿ ದಡ ಸೇರಿದರು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಈಜುಪಟುಗಳು ಹಾಗೂ ಬ್ಲೂ ಫ್ಲ್ಯಾಗ್ ಬೀಚ್‌ನ ಲೈಫ್ ಗಾರ್ಡ್‌ಗಳಾದ ಪ್ರಜ್ವಲ್, ಸುಶಾಂತ್ ಮತ್ತು ಬಾದಲ್ ಸಹಕರಿಸಿದರು.

ರಕ್ಷಿಸಲ್ಪಟ್ಟ ಯತೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.