ಉಡುಪಿ: ಅಜ್ಜರಕಾಡಿನಲ್ಲಿ ನೂತನವಾಗಿ ನಿರ್ಮಿಸಿರುವ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ಕಟ್ಟಡವನ್ನು ಕೂಡಲೇ ಜನರ ಸೇವೆಗೆ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭವಾಗಿದೆ.
ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದಿನಿಂದ 7 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಲಾಗುತ್ತಿದ್ದು, ಪ್ರತಿಭಟನಾಕಾರರು ಜಾಗಟೆ, ಗಂಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಆಸ್ಪತ್ರೆಗೆ ಬೇಕಾದ ಯಂತ್ರೋಪಕರಣ, ವೈದ್ಯರು, ದಾದಿಯರ ನೇಮಕ ಆಗದೆ ಉದ್ಘಾಟನೆ ವಿಳಂಬವಾಗುತ್ತಿದೆ. ಸೆ.30ರೊಳಗೆ ಸೇವೆಗೆ ಬಿಡಬೇಕೆಂದು ಗಡುವು ನೀಡಿದ್ದರೂ ಯಾವುದೇ ಸ್ಪಂದನೆ ಬರದ ಹಿನ್ನೆಲೆಯಲ್ಲಿ ಅ.1ರಿಂದ ಧರಣಿ ಆರಂಭಿಸಲಾಗಿದೆ ಎಂದು ಕರವೇ ಗೌರವಾಧ್ಯಕ್ಷ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
ಒಂದು ವಾರದೊಳಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.










