ರಾಜಸ್ಥಾನ : 22 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿದ ಆರೋಪದ ಮೇಲೆ ಬುಧವಾರ ಸಂಜೆ ಮೂವರನ್ನು ಪೊಲೀಸರು ರಾಜಸ್ಥಾನದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎದುರೇ ಬಂಧಿಸಿದ್ದಾರೆ.
ಅಪಹರಣವಾದ ಯುವತಿಯನ್ನು ಬಡಿಯಾ ಗ್ರಾಮದ ಸಂಗೀತಾ ಎಂದು ಗುರುತಿಸಲಾಗಿದೆ.
ಅಪಹರಣಕ್ಕೀಡಾದ ಕೆಲವೇ ಗಂಟೆಗಳಲ್ಲಿ ಆಕೆಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಅಪಹರಣಕಾರರ ಪೈಕಿ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಅಪಹರಣದಲ್ಲಿ ಪಾತ್ರ ವಹಿಸಿದ ಆರೋಪದ ಮೇಲೆ ಸಂತ್ರಸ್ತ ಮಹಿಳೆ ಸಂಗೀತಾಳ ತಂದೆ ಶಿವರಾಜ್ ಜಾಟ್ ಹಾಗೂ ಆಕೆಯ ಚಿಕ್ಕಪ್ಪಂದಿರಾದ ಕಾಲು ಮತ್ತು ಕಲ್ಯಾಣ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಮ್ಮಿಬ್ಬರ ಪ್ರೇಮ ವಿವಾಹಕ್ಕೆ ಸಂಗೀತಾಳ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ, ನಮಗೆ ರಕ್ಷಣೆ ನೀಡಿ ಎಂದು ಕೊಟ್ಡಿ ಪ್ರದೇಶದ ಲಕ್ಷ್ಮಿನಿಯಾಸ್ ಗ್ರಾಮದ ನಿವಾಸಿ ಹಾಗೂ ಸಂಗೀತಾ ಪತಿ ಗೋಪಾಲ್ ಜಾಟ್ ಅವರು ಭಿಲ್ವಾರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮೊರೆ ಹೋದ ಕೆಲವೇ ಕ್ಷಣಗಳಲ್ಲಿ ಈ ಅಪಹರಣ ನಡೆದಿದೆ.
ಈ ಘಟನೆಯ ವೇಳೆ ವಾಹನದ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಗಿದ್ದು, ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ.
ತಮಗೆ ರಕ್ಷಣೆ ನೀಡುವಂತೆ ದೂರು ನೀಡಲು ಸಂಗೀತಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದಂತೆಯೇ ಆಕೆಯ ಸಂಬಂಧಿಕರು ಬಲವಂತವಾಗಿ ಆಕೆಯನ್ನು ಕಪ್ಪು ಬಣ್ಣದ ಸ್ಕಾರ್ಪಿಯೊ ವಾಹನವೊಂದರಲ್ಲಿ ಕುಳ್ಳರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಅವರನ್ನು ತಡೆಯಲು ಯತ್ನಿಸಿದ ಪೊಲೀಸ್ ಸಿಬ್ಬಂದಿಯ ಮೇಲೆ ಆರೋಪಿಗಳು ವಾಹನವನ್ನು ಹರಿಸಲು ಯತ್ನಿಸಿದರು ಎಂದೂ ಪೊಲೀಸರು ಆರೋಪಿಸಿದ್ದಾರೆ.
ಈ ಸಂಬಂಧ ಆರೋಪಿಗಳ ವಿರುದ್ಧ ಅಪಹರಣ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ತಲೆ ಮರೆಸಿಕೊಂಡಿರುವ ಚಾಲಕನನ್ನು ಪತ್ತೆ ಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.



