ಶಂಕರನಾರಾಯಣ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 82 ವರ್ಷದ ವೃದ್ಧೆಯೊಬ್ಬರು ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗಿರಿಜಮ್ಮ ಶೆಡ್ತಿ (82) ಎಂದು ಗುರುತಿಸಲಾಗಿದೆ.
ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮನೆಯಲ್ಲೇ ಇರುತ್ತಿದ್ದರು. ಆಗಸ್ಟ್ 12ರಂದು ಬೆಳಿಗ್ಗೆ 7:45ರ ಸುಮಾರಿಗೆ ಗಿರಿಜಮ್ಮ ಅವರ ಪುತ್ರ ಶಿವರಾಮ ಶೆಟ್ಟಿ ಕೆಲಸಕ್ಕೆ ತೆರಳಿದ್ದರು. ಸುಮಾರು ಎರಡು ಗಂಟೆಗಳ ಬಳಿಕ 9:45ಕ್ಕೆ ಮನೆಗೆ ಮರಳಿದಾಗ ಮನೆಯ ಬಳಿ ದಟ್ಟ ಹೊಗೆ ಕಾಣಿಸಿಕೊಂಡಿದೆ.
ಪರಿಶೀಲಿಸಿದಾಗ ಗಿರಿಜಮ್ಮ ಅವರು ಅರೆಬೆಂದ ಸ್ಥಿತಿಯಲ್ಲಿ ಅಂಗಳದಲ್ಲಿ ಪತ್ತೆಯಾಗಿದ್ದು, ಕೂಗಿ ಕರೆದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.ವಯೋಸಹಜ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ಮನೆಯ ಹೊರಭಾಗದಲ್ಲಿ ಹಾಸಿಗೆ ಹಾಗೂ ಬಟ್ಟೆಗಳನ್ನು ಹಾಕಿ, ದೇಹಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




