ಉಡುಪಿ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು, ಸಹಾಯಕರು, ಗುಮಾಸ್ತರು, ವಾದ್ಯದವರು, ಪರಿಚಾರಕರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಎಲ್ಲಾ ವರ್ಗದ ಸಿಬ್ಬಂದಿಗಳ ವೇತನವನ್ನು ಹೆಚ್ಚಿಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಪ್ರಸ್ತುತ ನೀಡಲಾಗುತ್ತಿರುವ ವೇತನವು ಜೀವನ ವೆಚ್ಚ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದ್ದು, ಇದರಿಂದ ಸಿಬ್ಬಂದಿಗಳ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ವಿಶೇಷವಾಗಿ ಕಡಿಮೆ ಆದಾಯದ ದೇವಸ್ಥಾನಗಳ ಸಿಬ್ಬಂದಿಗಳ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಈ ಕಾರಣದಿಂದಾಗಿ ಯುವ ಸಮುದಾಯವು ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಮನವಿ ಮೂಲಕ ಗಮನ ಸೆಳೆದಿದ್ದಾರೆ.
ತ್ರಿಕಾಲ ಪೂಜೆ, ಧಾರ್ಮಿಕ ಸೇವೆಗಳು, ಹಬ್ಬ-ಹರಿದಿನಗಳು, ಜಾತ್ರೆ-ಉತ್ಸವಗಳು ಹಾಗೂ ಭಕ್ತಾದಿಗಳ ಸೇವೆ ಸೇರಿದಂತೆ ದೇವಸ್ಥಾನಗಳ ಸುಗಮ ಕಾರ್ಯನಿರ್ವಹಣೆಯಲ್ಲಿ ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಸೇವೆಗೆ ತಕ್ಕ ಗೌರವ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ದೇವಸ್ಥಾನಗಳ ಅರ್ಚಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳ ವೇತನವನ್ನು ಜೀವನ ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸಿ, ಗೌರವಯುತ ವೇತನ ಹೆಚ್ಚಳ ಮಂಜೂರು ಮಾಡುವುದರ ಜೊತೆಗೆ, ಕಾಲಕಾಲಕ್ಕೆ ವೇತನ ಪರಿಷ್ಕರಣೆಯಾಗುವ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಅವರು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.




