ದಂಪತಿಯ ಅಳಲಿಗೆ ಸ್ಪಂದಿಸದ ಅಧಿಕಾರಿಗಳು : ಶಾಸಕರ ಮಧ್ಯಸ್ಥಿಕೆಯಿಂದ ನ್ಯಾಯದ ನಿರೀಕ್ಷೆ….
ಪುತ್ತೂರು: ಸೂರು ಕಳೆದುಕೊಂಡ ಕೌಕ್ರಾಡಿ ಗ್ರಾಮದ ವೃದ್ಧ ದಂಪತಿ ರಾಧಾಮ ಮತ್ತು ಮುತ್ತುಸ್ವಾಮಿ ಅವರು ನ್ಯಾಯಕ್ಕಾಗಿ ಕಳೆದ ಒಂದು ವಾರದಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ನಡೆಸುತ್ತಿರುವ ಧರಣಿ ಸೋಮವಾರ ನ್ಯಾಯದ ನಿರೀಕ್ಷೆಯೊಂದಿಗೆ ಅಂತ್ಯವಾಗುವ ಸಾಧ್ಯತೆ ಇದೆ.
ನಡುಗುವ ಕೈಗಳು, ಹಣ್ಣಾದ ದೇಹ, ಸುಕ್ಕುಗಟ್ಟಿದ ಮುಖದಲ್ಲಿ ನ್ಯಾಯದ ನಿರೀಕ್ಷೆಯ ಕಣ್ಣುಗಳೊಂದಿಗೆ ವೃದ್ಧ ದಂಪತಿ ಕಳೆದ ಏಳು ದಿನಗಳಿಂದ ಬೀದಿಯಲ್ಲೇ ಕೂತು ಹೋರಾಟ ನಡೆಸುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ತಮ್ಮ ಹಕ್ಕಿನ ಮನೆಗಾಗಿ ವರ್ಷಗಳಿನಿಂದ ಅಧಿಕಾರಿಗಳ ಕಚೇರಿಗಳ ಮೆಟ್ಟಿಲು ಹತ್ತಿ ಇಳಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಧರಣಿಗೆ ಇಳಿಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ದಂಪತಿ ನೋವು ತೋಡಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವೃದ್ಧ ದಂಪತಿಯೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆ ಆಲಿಸಿದರು. ಬಳಿಕ ಕದಬ, ಸುಳ್ಯ ಹಾಗೂ ಪುತ್ತೂರು ತಾಲೂಕು ಮಟ್ಟದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಲು ಯತ್ನಿಸಿದರೂ, ಯಾರೊಬ್ಬರೂ ಕರೆ ಸ್ವೀಕರಿಸದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಜನಪ್ರತಿನಿಧಿಯ ಕರೆಗೂ ಸ್ಪಂದಿಸದ ಅಧಿಕಾರಿಗಳ ಧೋರಣೆ ಆಡಳಿತ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಹುಟ್ಟಿಸಿದೆ.
ಈ ವೇಳೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ಬಡವರ ಸಮಸ್ಯೆಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ವೃದ್ಧ ದಂಪತಿಗೆ ನ್ಯಾಯ ದೊರಕಿಸುವ ಹೊಣೆ ನನ್ನದು” ಎಂದು ಹೇಳಿ, ಸೋಮವಾರ ಅಧಿಕಾರಿಗಳನ್ನು ಕರೆಸಿ ಮುಖಾಮುಖಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಸರ್ಕಾರದ ಅನುದಾನದ ಮೂಲಕ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಶಾಸಕರ ಭರವಸೆಯ ಹಿನ್ನೆಲೆಯಲ್ಲಿ ವೃದ್ಧ ದಂಪತಿ ತಾತ್ಕಾಲಿಕವಾಗಿ ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆ.
ಈ ಹೋರಾಟಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ ಮಾತನಾಡಿ, “ಈ ದಂಪತಿಯ ನೋವು ಇಂದಿನದಲ್ಲ. 2012ರಿಂದಲೇ ತಮ್ಮ ವಾಸದ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ‘2015ರ ಮೊದಲು ನೀವು ಇಲ್ಲಿ ಇರಲಿಲ್ಲ’ ಎಂಬ ಕಾರಣ ಹೇಳಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅದೇ ಪ್ರದೇಶದ ಇತರರಿಗೆ ಜಾಗ ಮಂಜೂರಾಗಿರುವಾಗ ಈ ವೃದ್ಧ ದಂಪತಿಗೆ ಮಾತ್ರ ನ್ಯಾಯ ನಿರಾಕರಿಸಿರುವುದು ತಾರತಮ್ಯದ ಸ್ಪಷ್ಟ ಉದಾಹರಣೆ” ಎಂದು ಆರೋಪಿಸಿದರು.
ಈ ಘಟನೆ ಕೇವಲ ವೃದ್ಧ ದಂಪತಿಯ ವೈಯಕ್ತಿಕ ಸಮಸ್ಯೆಯಾಗದೆ, ಸಾಮಾನ್ಯ ನಾಗರಿಕ ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ. ಊಟ-ನಿದ್ದೆ ಬಿಟ್ಟು ವಾರಗಳ ಕಾಲ ಹೋರಾಟ ನಡೆಸಿದರೂ ಸ್ಪಂದನೆ ನೀಡದ ಅಧಿಕಾರಿಗಳ ಧೋರಣೆ ಮಾನವೀಯತೆಯ ಕೊರತೆಯನ್ನು ತೋರಿಸುತ್ತದೆ. ಸೋಮವಾರ ನಡೆಯಲಿರುವ ಚರ್ಚೆಯಿಂದ ವೃದ್ಧ ದಂಪತಿಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.




