ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಹೊಸದಾಗಿ ಸೆಂಟ್ರಿಂಗ್ ಕೆಲಸ ಆರಂಭಿಸಿ ಸಾಲ ಮಾಡಿಕೊಂಡಿದ್ದ ಯುವಕನು ಆರ್ಥಿಕ ಸಂಕಷ್ಟದಿಂದ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಬೆಳ್ಳಾಲ ಗ್ರಾಮದ ನಿವಾಸಿ ಅನಿಲ್ ಪೂಜಾರಿ (39) ಎಂದು ತಿಳಿದು ಬಂದಿದೆ.ವೃತ್ತಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಅನಿಲ್ ಪೂಜಾರಿ ಅವರು ಕೆಲವು ದಿನಗಳ ಹಿಂದಷ್ಟೇ ಹೊಸದಾಗಿ ಸೆಂಟ್ರಿಂಗ್ ಕೆಲಸ ಆರಂಭಿಸಿದ್ದರು. ಈ ಕೆಲಸಕ್ಕಾಗಿ ಕೈಗಡ, ಬ್ಯಾಂಕ್ ಹಾಗೂ ಸಂಘಗಳಿಂದ ಸಾಲ ಪಡೆದುಕೊಂಡಿದ್ದರು. ಪತ್ನಿ ಮತ್ತು ಮಕ್ಕಳೊಂದಿಗೆ ಮುಳ್ಳಹಕ್ಲುವಿನಲ್ಲಿ ವಾಸವಾಗಿದ್ದರು.
ದಿನಾಂಕ 11/08/2026 ರಂದು ಬೆಳಗಿನ ಜಾವ 5:00 ಗಂಟೆಗೆ ಮಲಗಿದ್ದ ಅನಿಲ್ ಎದ್ದು ಹೊರಗೆ ಹೋಗಿದ್ದಾರೆ. ಬೆಳಗ್ಗೆ 6:00 ಗಂಟೆಗೆ ಎದ್ದು ಬಂದ ತಂದೆ ಬಸವ ಪೂಜಾರಿ ಅವರು ಮನೆಯ ಹೊರಗಿನ ಕೊಟ್ಟಿಗೆಯ ಬಳಿ ಹೋದಾಗ, ಮಗ ಅನಿಲ್ ಕೊಟ್ಟಿಗೆಯ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ, ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಬಿಗಿದುಕೊಂಡು ಕೊಟ್ಟಿಗೆಯ ಕಟ್ಟೆಯ ಮೇಲಿನಿಂದ ಕೆಳಗೆ ಜಿಗಿದು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಈ ಘಟನೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆ UDR ಕ್ರಮಾಂಕ: 15/2026 U/S 194 BNSS ರಂತೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾಲದ ಬಾಧೆಯೇ ಸಾವಿಗೆ ಕಾರಣವೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.




