ಉಡುಪಿ: ನಗರದ ನಿಟ್ಟೂರು ವಿಷ್ಣುಮೂರ್ತಿ ದೇವಸ್ಥಾನದ ಹಿಂಭಾಗದ ಬಾಡಿಗೆ ಕೊಠಡಿಯಲ್ಲಿ 21 ವರ್ಷದ ಜ್ಯೋತಿ ಎಂಬ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಜ್ಯೋತಿ ಅವರನ್ನು 2025ರ ಜನವರಿ 24ರಂದು ವಿಜಯಪುರ ಜಿಲ್ಲೆಯ ಪ್ರಕಾಶ್ ಹೂನಳ್ಳಿ ಎಂಬವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.
ಬಳಿಕ ಜ್ಯೋತಿ ಅವರು ಪತಿ ಪ್ರಕಾಶ್ ಹಾಗೂ ಮಾವ ಅಮೋಘಿ ಅವರೊಂದಿಗೆ ನಿಟ್ಟೂರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ದಂಪತಿಗೆ ಶರಣ್ ಎಂಬ 9 ವರ್ಷದ ಮಗುವಿದೆ.
ಆಗಸ್ಟ್ 7ರಂದು ಸಂಜೆ ಸುಮಾರು 4:30ರ ವೇಳೆಗೆ ಜ್ಯೋತಿ ಅವರು ಮಗುವನ್ನು ಮಾವನ ಕೈಗೆ ನೀಡಿ ಕೊಠಡಿಯೊಳಗೆ ತೆರಳಿ ಬಾಗಿಲಿಗೆ ಚಿಲಕ ಹಾಕಿಕೊಂಡಿದ್ದರು.
ಮಗು ಅಳುತ್ತಿದ್ದರೂ ಜ್ಯೋತಿ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮಾವ ಅಮೋಘಿ ಅವರು ಸ್ಥಳೀಯರ ಸಹಾಯದಿಂದ ಬಾಗಿಲು ಬಲವಂತವಾಗಿ ತೆರೆದಿದ್ದಾರೆ.
ಒಳಗೆ ನೋಡಿದಾಗ ಜ್ಯೋತಿ ಅವರು ಅಡುಗೆ ಕಟ್ಟೆಯ ಮೇಲೆ ಹತ್ತಿ, ಸೀರೆಯನ್ನು ಕಬ್ಬಿಣದ ಪಟ್ಟಿಗೆ ಕಟ್ಟಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಕೆಳಗಿಳಿಸಿ ಪರಿಶೀಲಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ.
ಜ್ಯೋತಿ ಅವರು ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




