Home Karnataka News ಸಾಮಾಜಿಕ, ರಾಜಕೀಯ ಸೇವೆಗೆ ನಾಗೇಂದ್ರ ಪುತ್ರನ್‌ಗೆ ಕರ್ನಾಟಕ ಸೇವಾ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ…!!

ಸಾಮಾಜಿಕ, ರಾಜಕೀಯ ಸೇವೆಗೆ ನಾಗೇಂದ್ರ ಪುತ್ರನ್‌ಗೆ ಕರ್ನಾಟಕ ಸೇವಾ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ…!!

ಬೆಂಗಳೂರು: ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಸಮಾಜಮುಖಿ ಹೋರಾಟಗಾರ ಹಾಗೂ ರಾಜಕೀಯ ಕಾರ್ಯಕರ್ತ ನಾಗೇಂದ್ರ ಪುತ್ರನ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ಸೇವಾ ಶ್ರೇಷ್ಠ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ನೆಲಮಂಗಲದ ಪುಷ್ಪ ಬೈರೇಗೌಡ ಕನ್ವೆನ್‌ಷನ್ ಹಾಲ್‌ನಲ್ಲಿ ಆ. 8 ರಂದು ಶನಿವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ 4ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನಾಗೇಂದ್ರ ಪುತ್ರನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಾಮಾಜಿಕ ಕ್ಷೇತ್ರದಲ್ಲಿ ಜನಪರ ಕಾಳಜಿಯೊಂದಿಗೆ ವಿವಿಧ ಹೋರಾಟಗಳು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಗೇಂದ್ರ ಪುತ್ರನ್ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ಸೇವೆ ಸಲ್ಲಿಸಿರುವ ಅವರ ಜನಪರ ಕಾರ್ಯಗಳನ್ನು ಪರಿಗಣಿಸಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿದ ನಾಗೇಂದ್ರ ಪುತ್ರನ್ ಅವರು, ಸಮಾಜಮುಖಿ ಸೇವೆಗೆ ದೊರೆತಿರುವ ಈ ಗೌರವವನ್ನು ಜನರ ಸಮಸ್ಯೆಗಳ ಪರವಾಗಿ ಮುಂದುವರಿಯಲು ಮತ್ತಷ್ಟು ಜವಾಬ್ದಾರಿಯ ಪ್ರೇರಣೆಯಾಗಿ ಸ್ವೀಕರಿಸುವುದಾಗಿ ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಕಾರ್ಯಕ್ರಮ ಆಯೋಜಿಸಿದ ಬಂಗ್ಲೆ ಮಲ್ಲಿಕಾರ್ಜುನ ಅವರಿಗೆ ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಬೈಂದೂರಿನ ಗೋವಿಂದ ಬಾಬು ಪೂಜಾರಿ, ವಿನೋದ್ ರಾಜಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.