ಉಡುಪಿ : ಮುದರಂಗಡಿ ಪೇಟೆಯಲ್ಲಿ ವೇಳೆ ಹಾರಿದ 9ಎಂಎಂ ಪಿಸ್ತೂಲಿನ ಗುಂಡುಗಳು ಅಪರಾಧ ಲೋಕದ ಕರಾಳ ಹಾಗೂ ಕಠೋರ ವಾಸ್ತವವನ್ನು ಕರಾವಳಿಯ ಮುಂದೆ ಬಿಚ್ಚಿಟ್ಟಿವೆ.
17 ಪ್ರಕರಣಗಳಲ್ಲಿ ಆರೋಪಿಯಾಗಿದ್ದ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಅವರು ತಮ್ಮ ಬಿಳಿ ಬಣ್ಣದ ಥಾರ್ ಕಾರಿನ ಬಳಿಯೇ ಹೆಣವಾಗಿ ಬಿದ್ದಿದ್ದರು.
ಸಿನಿಮಾ ಶೈಲಿಯಲ್ಲಿ ನಡೆಯುವ ಕೊಲೆಗಳಿಗೂ, ನಿಜವಾದ ಕ್ರೈಂ ಜಗತ್ತಿಗೂ ಇರುವ ವ್ಯತ್ಯಾಸವನ್ನು ಈ ಹತ್ಯೆಯ ಸಂಚು ಸಾರಿಸಾರಿ ಹೇಳುತ್ತಿದೆ.
₹3 ಕೋಟಿ ಸಬ್-ಟೆಂಡರ್ ಮತ್ತು ನಿಗೂಢ ‘ಕೋಡ್ ವರ್ಡ್’ ಕಾರ್ಯಾಚರಣೆ:
ಯುಪಿಸಿಎಲ್ (UPCL) ಘಟಕದಲ್ಲಿ ಸಿವಿಲ್ ಕಾಮಗಾರಿಗೆ ಸಂಬಂಧಿಸಿದ ₹3 ಕೋಟಿ ಮೌಲ್ಯದ ಸಬ್-ಟೆಂಡರ್ ವ್ಯವಹಾರದಲ್ಲಿ ಉಂಟಾದ ತೀವ್ರ ಹಣಕಾಸಿನ ವೈಮನಸ್ಯವೇ ಈ ಶೂಟೌಟ್‌ಗೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.
ಈ ದ್ವೇಷದ ಕಿಚ್ಚಿಗೆ ಉತ್ತರ ಭಾರತದ ಸುಪಾರಿ ಹಂತಕರನ್ನು ಬಳಸಿಕೊಳ್ಳಲಾಗಿತ್ತು.
ರಿಯಲ್ ಕ್ರೈಂ ಜಗತ್ತಿನ ಕರಾಳ ತಂತ್ರ ಇಲ್ಲಿದೆ ನೋಡಿ—ಈ ಹತ್ಯೆಗೆ ನಿಯೋಜನೆಗೊಂಡಿದ್ದ ಮೂವರು ಪ್ರೊಫೆಷನಲ್ ಶೂಟರ್‌ಗಳಿಗೆ ಒಬ್ಬರಿಗೊಬ್ಬರು ನಿಜವಾದ ಹೆಸರಾಗಲಿ, ಮುಖವಾಗಲಿ ತಿಳಿದಿರಲಿಲ್ಲ.
ಕೇವಲ ‘ರಹಸ್ಯ ಕೋಡ್ ವರ್ಡ್‌ಗಳ’ ಮೂಲಕವಷ್ಟೇ ಪರಸ್ಪರ ಸಂಪರ್ಕದಲ್ಲಿದ್ದ ಈ ಖತರ್ನಾಕ್ ಗ್ಯಾಂಗ್, ಬರೋಬ್ಬರಿ ಎರಡು ತಿಂಗಳಿನಿಂದ ಮುದರಂಗಡಿಯಲ್ಲಿ ಬೀಡುಬಿಟ್ಟು ಡೇವಿಡ್ ಅವರ ಪ್ರತಿಯೊಂದು ನಡವಳಿಕೆಯನ್ನು ರಹಸ್ಯವಾಗಿ ಟ್ರ್ಯಾಕ್ ಮಾಡಿತ್ತು.
ಶೂಟರ್ ರಾಜುನ ಖಾತೆಗೆ ಸುಪಾರಿ ಹಣದ ಕಂತುಗಳಾಗಿ ₹2 ಲಕ್ಷಕ್ಕೂ ಹೆಚ್ಚು ಹಣ ಜಮೆಯಾಗಿತ್ತು. ಹತ್ಯೆ ನಡೆದ ಬಳಿಕ ಗೂಗಲ್ ಪೇ ಮಾಡಿದ ಸ್ಥಳೀಯ ಯಾರು?
ಕೃತ್ಯದ ನಂತರದ ರಹಸ್ಯ ‘ಎಸ್ಕೇಪ್ ಪ್ಲಾನ್’:
ಡೇವಿಡ್ ಡಿಸೋಜಾ ಅವರ ಮೇಲೆ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಿ ಹತ್ಯೆಗೈದ ಬಳಿಕ, ಹಂತಕರು ತಪ್ಪಿಸಿಕೊಳ್ಳಲು ಬಳಸಿದ ತಂತ್ರ ಅಪರಾಧ ಲೋಕದ ವೃತ್ತಿಪರತೆಗೆ ಸಾಕ್ಷಿ. ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಎರ್ಮಾಳು ಬಳಿ ಬಿಟ್ಟು, ಮೂವರೂ ಒಂದೇ ಬಸ್ಸನ್ನು ಹತ್ತಿದ್ದರು.
ಆದರೆ, ಬಸ್ಸಿನೊಳಗೆ ಸಂಪೂರ್ಣ ಅಪರಿಚಿತರಂತೆ ಪ್ರತ್ಯೇಕ ಆಸನಗಳಲ್ಲಿ ಕುಳಿತು, ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ್ದರು.’ಖಾಕಿ ಪಡೆ’ಯ ಮಿಂಚಿನ ಶೂಟೌಟ್ ಮತ್ತು ಬಂಧನ
ಶಿರ್ವ ಪಿಎಸ್ಐ ಮಂಜುನಾಥ್ ಮರಬದ ಅವರು ಸ್ಥಳದಲ್ಲಿ ಸಾಕ್ಷ್ಯಗಳನ್ನು ರಕ್ಷಿಸಿ ರವಾನಿಸಿದ ಆಧಾರದ ಮೇಲೆ, ಉಡುಪಿ ಮತ್ತು ಉತ್ತರ ಕನ್ನಡ ಪೊಲೀಸರು ಗಡಿಭಾಗದಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಬೃಹತ್ ನಾಕಾಬಂಧಿ ಹೇರಿದ್ದರು.
ಬೈಂದೂರು ಪಿಎಸ್ಐ-2 ಮಹೇಶ್ ಅವರು ಬಸ್ಸನ್ನು ತಡೆದು ಪರಿಶೀಲಿಸುವಾಗ, ಆರೋಪಿಗಳು ಒತ್ತಿನೆಣೆ ಬಳಿ ಬಸ್ಸಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದರು.
ಈ ವೇಳೆ ಎ1 ಶೂಟರ್ ರಾಜು, ತಡೆಯಲು ಬಂದ ಕಾಪು ಪಿಎಸ್‌ಐ ತೇಜಸ್ವಿ ಅವರ ಮೇಲೆಯೇ ಹಲ್ಲೆಗೆ ಮುಂದಾದಾಗ, ಅಧಿಕಾರಿಯು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಪ್ಲಾನ್ ಧ್ವಂಸ ಮಾಡಿದರು. ಪರಾರಿಯಾಗಿದ್ದ ಉಳಿದಿಬ್ಬರನ್ನು ಭಟ್ಕಳ ಹಾಗೂ ಕುಮುಟಾ ಪೊಲೀಸರು ತಕ್ಷಣವೇ ರೌಂಡ್-ಅಪ್ ಮಾಡಿ ಸೆರೆಹಿಡಿದರು.
ಸದ್ಯ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಉಡುಪಿ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಸುಪಾರಿ ನೀಡಿದ ನಿಜವಾದ ‘ಕಾರ್ಪೊರೇಟ್ ಸೂತ್ರಧಾರ’ನ ಬಂಧನಕ್ಕೆ ವಿಶೇಷ ಪಡೆ ಹೊರರಾಜ್ಯಕ್ಕೆ ಧಾವಿಸಿದೆ.






